ಕರಾವಳಿ

‘ಅನ್ನ ಭಾಗ್ಯ’ ಅಕ್ಕಿಗೆ ಕನ್ನ: ಕೋಟೇಶ್ವರದಲ್ಲಿ ಲಕ್ಷಾಂತರ ರೂ. ಮೌಲ್ಯದ ಪಡಿತರ ವಶ-ಓರ್ವನ ಬಂಧನ, ಇಬ್ಬರು ಪರಾರಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿಟ್ಟಿದ್ದ ಪಡಿತರ ಅಕ್ಕಿಯನ್ನು ಆಹಾರ ನಿರೀಕ್ಷಕರು ಹಾಗೂ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಅಜಾಮ್ ಬಂಧಿತ ಆರೋಪಿಯಾಗಿದ್ದು, ಕೋಟೆಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ, ಇನ್ನೋರ್ವ ಆರೋಪಿ ರಾಮ ಪೂಜಾರಿ ತಲೆಮರೆಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕೋಟೆಶ್ವರ ಗ್ರಾಮದ ಹಾಲಾಡಿ ರಸ್ತೆಯಲ್ಲಿರುವ ನಂದಿ ಹೋಟೆಲ್ ನ ಹಿಂಭಾಗದ ಉದಯ್ ಕುಮಾರ್ ಶೆಟ್ಟಿ ಎಂಬಾತನ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಯತ್ನಸುತ್ತಿದ್ದಾಗ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಸಿಬ್ಬಂದಿಗಳು ಹಾಗೂ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಅವರು ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 3,76,800 ರೂ. ಮೌಲ್ಯದ 25,120 ಕೆಜಿ ಪಡಿತರ ಅಕ್ಕಿ, 2 ಲಕ್ಷ ರೂ ಮೌಲ್ಯದ ಅಶೋಕ್ ಲೈಲ್ಯಾಡ್ ಗೂಡ್ಸ್ ಗಾಡಿ, 4 ಲಕ್ಷ ರೂ ಮೌಲ್ಯದ ಟಾಟಾ ಲಾರಿ, 2,000 ರೂ. ಮೌಲ್ಯದ ಹೊಲಿಗೆ ಯಂತ್ರ ಹಾಗೂ 3,000 ರೂ. ಮೌಲ್ಯದ ತೂಕದ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಇಬ್ಬರ ಬಂಧನಕ್ಕೆ ಬಲೆಬೀಸಲಾಗಿದೆ‌‌. ಅಕ್ರಮ ಪಡಿತರ ಸಾಗಾಟ, ಮಾರಾಟ ಹಾಗೂ ದಾಸ್ತಾನು ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುತ್ತದೆ ಎಂದು ಪಿಎಸ್ಐ ಸದಾಶಿವ ಗವರೋಜಿ ತಿಳಿಸಿದ್ದಾರೆ.

Comments are closed.