ಕರಾವಳಿ

ದ್ವಿತೀಯ ಪಿ.ಯು.ಸಿ. ತರಗತಿ: ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 31 : ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಪಾಲಿಸುವುರೊಂದಿಗೆ ದ್ವಿತೀಯ ಪಿ.ಯು.ಸಿ. ತರಗತಿಗಳನ್ನು ಪ್ರಾರಂಭಿಸಬೇಕು. ತಪ್ಪಿದ್ದಲ್ಲಿ ಶಾಲೆಯ ಪ್ರಾಚಾರ್ಯರ ವಿರುದ್ದ ಭಾದ್ಯಸ್ಥತನ್ನಾಗಿಸಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ತರಗತಿ ಆರಂಭದ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು, ಬೋಧನಾ ಸಿಬ್ಬಂಧಿಗಳು ಸುರಕ್ಷಿತವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸರ್ಕಾರ ಸೂಚಿಸಿರುವ ಸಾಮಾನ್ಯ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರುಗಳು ನಿರ್ಲಕ್ಷ್ಯವಹಿಸದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಬೇಕು ಎಂದರು. ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಮುನ್ನ ಶಾಲಾ ಕೊಠಡಿ, ಪ್ರಯೋಗ ಶಾಲೆ, ಶೌಚಾಲಯ ಸೇರಿದಂತೆ ಮತ್ತಿತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು ಎಂದರು.

ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಣೆ ಹಾಗೂ ಪೋಷಕರಿಂದ ಸಮ್ಮತಿ ಪತ್ರವನ್ನು ಪಡೆಯಬೇಕು ಎಂದ ಅವರು, ಕೊವೀಡ್-19 ಸೋಂಕಿನ ಲಕ್ಷಣ ಇಲ್ಲದ ಬಗ್ಗೆ ದೃಢೀಕರಣ ಪತ್ರವನ್ನು ಪೋಷಕರಿಂದ ಕಡ್ಡಾಯವಾಗಿ ಪಡೆಯಬೇಕು ಎಂದರು.

ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಮಕಳ್ಕ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ನಿರ್ವಹಣೆ ಮಾಡಬೇಕು. ಪ್ರತಿದಿನ ವಿದ್ಯಾರ್ಥಿಗಳಿಗೆ 3 ಗಂಟೆ ಅವಧಿಯಲ್ಲಿ ಪ್ರತಿ 45 ನಿಮಿಷದ ತರಗತಿ ಪಿರೇಡ್‍ಗಳನ್ನು ತೆಗೆದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಶಾಲೆಯ ಮೆಟ್ಟಿಲು ಹತ್ತುವಾಗ, ಇಳಿಯುವಾಗ ಹಾಗೂ ಶಾಲೆಯ ಕಾರಿಡಾರ್‍ಗಳಲ್ಲಿ ಗುಂಪು ಗೂಡದಂತೆ ನಿಯಂತ್ರಣ ಮಾಡುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಬಳಸಬೇಕು. ವಿದ್ಯಾರ್ಥಿಗಳು ಕೈಗಳನ್ನು ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಹಾಗೂ ಶಾಲೆಯ ಆವರಣದೊಳಗಡೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಕ್ರಮ ವಹಿಸಬೇಕು ಎಂದರು.

ಅನಾರೋಗ್ಯಕ್ಕೆ ತುತ್ತಾದಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಲು ಪ್ರತ್ಯೇಕ ಕೊಠಡಿ ಕಾಯ್ದಿರುಸಬೇಕು ಹಾಗೂ ಅವರಿಗೆ ವೈದ್ಯಕೀಯ ನೆರವನ್ನು ಕೊಡಿಸಬೇಕು ಎಂದರು.

ಹಾಸ್ಟೆಲ್‍ಗಳಲ್ಲಿ ತಂಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು, ಅಲ್ಲದೆ ಅಲ್ಲಿ ಸಾಮಜಿಕ ಅಂತರ ಕಾಯ್ದುಕೊಳ್ಳುವಂತೆ ಮೇಲ್ವಿಚಾರಕರು ಕ್ರಮ ವಹಿಸಬೇಕು ಎಂದ ಅವರು, ರೋಗದ ಲಕ್ಷಣ ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಿ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಕೇರಳ ರಾಜ್ಯದಿಂದ ಬರುವಂತಹ ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರುವಂತೆ ಸೂಚನೆ ನೀಡಬೇಕು ಎಂದರು. ಟ್ಯುಟೋರಿಯಲ್‍ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿದೆ, ಈ ಬಗ್ಗೆ ಆರೋಗ್ಯ ಇಲಾಖೆಯು ಸೂಕ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಚಂದ್ರ ಬಾಯರಿ, ಕೋವಿಡ್ ನೋಡೆಲ್ ಅಧಿಕಾರಿ ಡಾ. ಅಶೋಕ್, ಪಿ.ಯು. ಶಿಕ್ಷಣ ಸಂಸ್ಥೆಯ ಉಪನಿರ್ದೇಶಕ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ಧರು.

Comments are closed.