ಕರಾವಳಿ

ಜಿಲ್ಲೆಯ ಬ್ಯಾಂಕುಗಳು ಅರ್ಹ ಫಲಾನುಭವಿಗಳಿಗೆ ವಿಳಂಬ ಮಾಡದೆ ಆರ್ಥಿಕ ನೆರವು ನೀಡಲು ಸೂಚನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 30 : ಜಿಲ್ಲೆಯ ಬ್ಯಾಂಕುಗಳು ಶೈಕ್ಷಣಿಕ ಮತ್ತು ಗೃಹ ಸಾಲ ಯೋಜನೆಗಳಿಗೆ ಸಂಬಂಧಿಸಿದಂತೆ ಇನ್ನೂ ಉತ್ತಮ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.

ಅವರು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕುಗಳ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸರಕಾರ ಜನರ ಕಲ್ಯಾಣಕ್ಕಾಗಿ ರೂಪಿಸುವ ಪ್ರತಿಯೊಂದು ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅಡಿಯಲ್ಲಿ ಆರ್ಥಿಕ ನೆರವು ಕೋರಿದ ಅರ್ಜಿಗಳನ್ನು ಅರ್ಹ ಫಲಾನುಭವಿಗಳಿಂದ ಪಡೆದು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಬ್ಯಾಂಕ್ ಮ್ಯಾನೇಜರ್‍ಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾವಾರು ಸಾಲ ಠೇವಣಿ ಅನುಪಾತವು ಆರ್.ಬಿ.ಐ ಯ ನಿಗದಿತ ಮಾನದಂಡಕ್ಕಿಂತ ಸ್ವಲ್ಪ ಕಡಿಮೆ ಇರುವುದರಿಂದ ಬ್ಯಾಂಕುಗಳು ಹೆಚ್ಚಿನ ಸಾಲ ನೀಡುವ ಮೂಲಕ ನಿರ್ದಿಷ್ಟ ಗುರಿ ಸಾಧಿಸಬೇಕು ಎಂದ ಅವರು, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೃಜನಶೀಲ ಯೋಜನೆಯಡಿ (ಪಿಎಮ್‍ಇಜಿಪಿ) ಜಿಲ್ಲೆಯ ಸಾಧನೆ ಉತ್ತಮವಾಗಿದೆ ಎಂದರು.

ಬ್ಯಾಂಕ್ ನೀಡುವ ವಿವಿಧ ಸಾಲ ಸೌಲಭ್ಯವನ್ನು ಸೂಕ್ತ ಮಾಹಿತಿಯೊಂದಿಗೆ ಪ್ರಚಾರ ಪಡಿಸಿ, ಗ್ರಾಹಕರು ಹೆಚ್ಚಿನ ಸಾಲ ಸೌಲಭ್ಯವನ್ನು ಪಡೆಯುವಂತೆ ಪ್ರೇರೇಪಿಸಬೇಕು. ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆ, ಸಹನೆಯಿಂದ ಸಹಕರಿಸಬೇಕು ಎಂದರು.

ಮುದ್ರಾ ಯೋಜನೆಯಡಿ 7154 ಖಾತೆಗಳಿಗೆ ರೂ 76.11 ಕೋಟಿಯಷ್ಟು ಸಾಲವು ಪ್ರಸ್ತುತ ಮೊದಲರ್ದ ವರ್ಷದಲ್ಲಿ ವಿತರಿಸಲ್ಪಟ್ಟಿದೆ. ಅಟಲ್ ಪಿಂಚಣಿ ಯೋಜನೆಯಡಿ 2020ರ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ಒಟ್ಟು 80,776 ಖಾತೆಗಳು ತೆರೆಯಲ್ಪಟ್ಟಿವೆ ಎಂದರು.

ಖಾತರಿಪಡಿಸಿದ ತುರ್ತು ಕ್ರೆಡಿಟ್ ಲೈನ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಬ್ಯಾಂಕ್‍ಗಳು ಸೂಕ್ಷ್ಮ, ಅತೀ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಲಯಕ್ಕೆ ಒಟ್ಟು 12932 ಖಾತೆಗಳಡಿ ರೂ 493.81 ಕೋಟಿಯಷ್ಟು ಮಂಜೂರಾತಿ ನೀಡಲಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ್ 15 ರವರೆಗೆ 3,486 ಮಂಜೂರಾತಿ ಮಾಡಲಾಗಿದೆ ಎಂದರು.

ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಮಾತನಾಡಿ, ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 640 ಬ್ಯಾಂಕ್ ಶಾಖೆಗಳು ಇದ್ದು, ಬ್ಯಾಂಕುಗಳ ಒಟ್ಟು ವ್ಯವಹಾರ ರೂ 80592.66 ಕೋಟಿ ಆಗಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್‍ಗಳು ಶೇ. 9.39 ರಷ್ಟು ಬೆಳವಣಿಗೆಯನ್ನು ಸಾಧಿಸಿವೆ. ಜಿಲ್ಲೆಯಲ್ಲಿ ಒಟ್ಟು 7608.88 ಕೋಟಿ ಸಾಲ ವಿತರಿಸಲಾಗಿದ್ದು ಮೊದಲರ್ದ ವರ್ಷದ ಗುರಿಯಾದ ರೂ. 9312.16 ಕೋಟಿಯ 81.71 ಶೇಕಡವಾರು ನಿರ್ವಹಣೆಯನ್ನು ಸಾಧಿಸಲಾಗಿದೆ ಎಂದರು.

ಕೃಷಿ ಕ್ಷೇತ್ರಕ್ಕೆ ರೂ. 2625.40 ಕೋಟಿ, ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ ರೂ 1628.81 ಕೋಟಿ, ವಿದ್ಯಾಭ್ಯಾಸ ಕ್ಷೇತ್ರಕ್ಕೆ ರೂ 23.69 ಕೋಟಿ, ವಸತಿ ಕ್ಷೇತ್ರಕ್ಕೆ ರೂ 231.12 ಕೋಟಿ, ಆದ್ಯತಾ ಕ್ಷೇತ್ರಕ್ಕೆ ಒಟ್ಟು ರೂ 4834.61 ಕೋಟಿ ಸಾಲ ಈ ವರೆಗೆ ವಿತರಣೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆರ್.ಬಿ.ಐ ಸಹಾಯಕ ಮಹಾಪ್ರಬಂಧಕ ಜಿ. ವೆಂಕಟೇಶ್ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಭಾಗವಹಿಸಿ, ಇತ್ತೀಚಿಗೆ ಬದಲಾದ ಆರ್.ಬಿ.ಐ ನಿಯಮಾವಳಿಗಳನ್ನು ತಿಳಿಸಿದರು.

ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಬಾಲಮುಕುಂದ ಶರ್ಮಾ, ಉಜಿರೆ ರುಡ್‍ಸೆಟ್ ನಿರ್ದೆಶಕ ಪಡದಯ್ಯಾ, ವಿವಿಧ ಬ್ಯಾಂಕುಗಳ ಮ್ಯಾನೇಜರ್, ಪ್ರಾದೇಶಿಕ ಮ್ಯಾನೇಜರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ಧರು.

Comments are closed.