ಕರ್ನಾಟಕ

ಕೊರೋನಾ ನೆಗೆಟಿವ್ ವರದಿ ಬಂದ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

Pinterest LinkedIn Tumblr

ಹೈದರಾಬಾದ್ : ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಕ್ತದೊತ್ತಡದಲ್ಲಿ ತೀವ್ರ ಏರಿಳಿತದ ಸಮಸ್ಯೆಯಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರವಷ್ಟೇ ಕರೊನಾ ನೆಗಿಟಿವ್​ ವರದಿ ಲಭಿಸಿದ್ದು, ಇದೀಗ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ರಜನಿ ಅವರನ್ನು ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ‘ಇಂದು ಬೆಳಗ್ಗೆ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 10 ದಿನಗಳಿಂದ ಹೈದರಾಬಾದ್ ನಲ್ಲಿ ಸಿನಿಮಾ ವೊಂದರ ಶೂಟಿಂಗ್ ನಲ್ಲಿದ್ದಾರೆ. ಸೆಟ್ ನಲ್ಲಿದ್ದ ಒಂದೆರಡು ಮಂದಿ ಕೋವಿಡ್-19 ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಡಿಸೆಂಬರ್ 22ರಂದು ಕೋವಿಡ್-19 ಗಾಗಿ ರಜನಿಕಾಂತ್ ಅವರನ್ನು ಪರೀಕ್ಷಿಸಲಾಗಿತ್ತು. ರಜನಿಕಾಂತ್ ಅವರಿಗೆ ಕೊರೋನಾ ನೆಗೆಟಿವ್ ಎಂಬುದಾಗಿ ತಿಳಿಸಿದೆ.

ರಜನಿಕಾಂತ್​ ಅವರು ‘ಅಣ್ಣಾತ್ತೆ’ ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್​ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್​ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.

ಕರೋನಾ ನೆಗೆಟಿವ್ ಎಂಬುದಾಗಿ ಪರೀಕ್ಷೆಯ ವರದಿಯಿಂದ ತಿಳಿದು ಬಂದರೂ, ಅಂದಿನಿಂದ ರಜನಿ ಅವರು ಪ್ರತ್ಯೇಕಗೊಂಡು, ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದಾರೆ. ಅವರಿಗೆ ಕೋವಿಡ್-19 ರ ಯಾವುದೇ ಲಕ್ಷಣಗಳು ಇರಲಿಲ್ಲವಾದರೂ, ಅವರ ರಕ್ತದೊತ್ತಡದಲ್ಲಿ ತೀವ್ರವಾದ ಏರಿಳಿತಗಳು ಕಂಡುಬಂದಿವೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಅದಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಡಿಸ್ಚಾರ್ಜ್ ಆಗುವ ಮುನ್ನ ಅವರ ರಕ್ತದೊತ್ತಡ ಕಡಿಮೆಯಾಗುವವರೆಗೂ ಅವರನ್ನು ಆಸ್ಪತ್ರೆಯಲ್ಲಿಯೇ ತಪಾಸಣೆ ಗೊಳಪಡಿಸಲಾಗುತ್ತದೆ. ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ರಕ್ತದೊತ್ತಡದಲ್ಲಿ ಏರುಪೇರು ಮತ್ತು ಆಯಾಸದ ಹೊರತಾಗಿ ಅವರಿಗೆ ಬೇರೆ ಯಾವುದೇ ರೋಗಲಕ್ಷಣಗಳಿರುವುದಿಲ್ಲ. ಹಿಮೋಡೈನಮಿಕ್ ಆಗಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ ಎಂಬ ಮಾಹಿತಿ ವರದಿಯಾಗಿದೆ.

ಇಷ್ಟಕ್ಕೂ ರಜನಿಕಾಂತ್​ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್​ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.

Comments are closed.