
ಮಂಗಳೂರು : ಮಾರುಕಟ್ಟೆ, ಬಸ್ಸ್ಟಾಂಡ್, ಇನ್ನಿತರ ಪ್ರದೇಶಗಳಲ್ಲಿ ಸಾರ್ವಜನಿಕರು ವ್ಯಕ್ತಿಗತ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸಿಕೊಂಡು ತಮ್ಮ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಬಸ್ಗಳಲ್ಲಿ ಡ್ರೈವರ್ ಹಾಗೂ ಕಂಡೆಕ್ಟರ್ ಸೇರಿದಂತೆ ಇನ್ನಿತರ ಸಾರಿಗೆ ವಾಹನಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವುದು ಗಮನಕ್ಕೆ ಬಂದರೆ ಸಾರಿಗೆ ಅಧಿಕಾರಿಗಳು ನಿಗದಿತ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು.
ಅಂಗಡಿ, ಮಾಲ್, ಮಾರುಕಟ್ಟೆಗಳಲ್ಲಿ ಗ್ರಾಹಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಅಂತಹ ಸಂದರ್ಭದಲ್ಲಿ ಅಂಗಡಿಯ ಮಾಲೀಕನಿಗೆ ದಂಡ ವಿಧಿಸಬೇಕು. ಆಶಾ ಕಾರ್ಯಕರ್ತೆಯರು ವಿದೇಶದಿಂದ ಬಂದವರ ಮಾಹಿತಿ ಪಡೆದು ಆರೋಗ್ಯ ಕೇಂದ್ರಕ್ಕೆ ನೀಡಬೇಕು, ಅವರನ್ನು ಕಡ್ಡಾಯವಾಗಿ ಆರ್ಟಿಪಿಸಿರ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಈ ಬಗ್ಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯತ್ ಇ.ಓ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜನ ಸಾಮಾನ್ಯರೊಂದಿಗೆ ಕೋವಿಡ್ ಸೋಂಕು ತಡೆಯುವ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಮುನ್ನೆಚ್ಚರಿಕಾ ಕ್ರಮಗಳು ಪರಿಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
Comments are closed.