ಕರಾವಳಿ

ಪೊಲೀಯೋ ಲಸಿಕೆಯಿಂದ ಯಾವುದೇ ಮಗು ವಂಚಿತರಾಗಬಾರದು : ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಿಸಿ ಸೂಚನೆ

Pinterest LinkedIn Tumblr

ಮಂಗಳೂರು: ಜಿಲ್ಲೆಯಲ್ಲಿ 5 ವರ್ಷದೊಳಗಿನ ಯಾವುದೇ ಮಗು ಪೊಲೀಯೋ ಲಸಿಕೆಯಿಂದ ವಂಚಿತರಾಗಬಾರದು, ಆದುದರಿಂದ ಪಾಲಿಕೆಯ ವ್ಯಾಪ್ತಿ ಹಾಗೂ ಇನ್ನಿತರ ಪ್ರದೇಶಗಳಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳು, ವಲಸೆ ಬಂದ ಕುಟುಂಬ, ಕೊಳಚೆ ಪ್ರದೇಶದಲ್ಲಿ ವಾಸವಿರುವ ಮಕ್ಕಳನ್ನು ಗುರುತಿಸಿ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ 2021 ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಬಗ್ಗೆ ಸಾರ್ವಜನಿಕರಿಗೆ ಜಿಂಗಲ್, ಭಿತ್ತಿಪತ್ರ ಡಿಜಿಟಲ್ ಎಲ್.ಇ.ಡಿ ಪರದೆ, ಜಾಹೀರಾತು, ಸೇರಿದಂತೆ ಮತ್ತಿತರ ಚಟುವಟಿಕೆಯ ಮೂಲಕ ಹೆಚ್ಚಿನ ಪ್ರಚಾರ ನೀಡಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯಾದಿಕಾರಿ ರಾಮಚಂದ್ರ ಬಾಯರಿ ಮಾತನಾಡಿ, ಜನವರಿ 17 ರಂದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಬೂತ್ ಮಟ್ಟದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ಎಲ್ಲಾ ಅಂಗನವಾಡಿ ಕೇಂದ್ರ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ. ಜನವರಿ 18, 19, 20 ರಂದು ಮನೆ ಭೇಟಿ ಮಾಡುವ ಮೂಲಕ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಕೋವಿಡ್ ಮುಂಜಾಗೃತಾ ಕ್ರಮ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿದರೆ ಬೂತ್ ಸಂಖ್ಯೆಯನ್ನು ಜಾಸ್ತಿ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಐಎಎಸ್ ಪ್ರೋಬೇಷನರಿ ಆಫಿಸರ್ ಮೋನಾ ರೋತ್, ಆರ್.ಸಿಹೆಚ್ ಅಧಿಕಾರಿ ಡಾ. ರಾಜೇಶ್, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.