ಕರಾವಳಿ

ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಾರ್ಗ ಸೂಚಿ ಉಲ್ಲಂಘಿಸಿದರೆ ದಂಡ ; ಡಿಸಿ ಎಚ್ಚರಿಕೆ

Pinterest LinkedIn Tumblr

ಮಂಗಳೂರು: ಮದುವೆ ಸೇರಿದಂತೆ ಇನ್ನಿತರ ಸಭಾ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಅಧಿಕ ಹಾಗೂ ಬಯಲು ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಲ್ಲಿ 500 ಕ್ಕಿಂತ ಅಧಿಕ ಜನ ಪಾಲ್ಗೊಳ್ಳ ಬಾರದು. ಒಂದು ವೇಳೆ ಮಿತಿ ಮೀರಿದ ಜನ ಪಾಲ್ಗೊಂಡಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮುಖ್ಯಸ್ಥರಿಗೆ ಹತ್ತು ಸಾವಿರ ದಂಡ ವಿಧಿಸಬೇಕು. ಮೂರನೇ ಬಾರಿಯೂ ಉಲ್ಲಂಘನೆ ಯಾದರೆ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆಯ ಪೂರ್ವ ತಯಾರಿ ಹಾಗೂ ರೂಪಾಂತರಿತ ಹೊಸ ಕೊರೋನಾ ರೋಗಗದ ಕುರಿತು ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಲು ಸಾಲು ರಜೆ, ಹಾಗೂ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚಾಗಿ ಇರುವುದರಿಂದ ಭಕ್ತಾಧಿಗಳು ಹಾಗೂ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ 65 ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು.

ಇದಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ದೇವಸ್ಥಾನಗಳ ಆವರಣದಲ್ಲಿ ಪ್ರದರ್ಶಿಸಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಉಪಯೋಗಿಸಿಕೊಳ್ಳುವಂತೆ ಆಡಳಿತ ಮಂಡಳಿಯು ಕ್ರಮ ವಹಿಸಬೇಕು. ಈ ಕಾನೂನುಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಐಎಎಸ್ ಪ್ರೋಬೇಷನರಿ ಆಫಿಸರ್ ಮೋನಾ ರೋತ್, ಆರ್.ಸಿಹೆಚ್ ಅಧಿಕಾರಿ ಡಾ. ರಾಜೇಶ್, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.