ಕರಾವಳಿ

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗ್ರಾ.ಪಂ ಚುನಾವಣೆ ಹಿನ್ನೆಲೆ ಬೈಂದೂರಿನ ಮಂಡಲ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇದು ಗ್ರಾಮ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆಯಾಗಿದ್ದು ಪಂಚಾಯತ್ ರಾಜ್ ವ್ಯವಸ್ಥೆ ಆಳಿಸಿಕೊಳ್ಳುವವರ ಆಡಳಿತವಾಗಿದೆ. ಆಳಿಸಿಕೊಳ್ಳುವವರ ಆಡಳಿತದಲ್ಲಿ ಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 6020 ಗ್ರಾ.ಪಂ ನಲ್ಲಿ ಚುನಾವಣೆ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ 154 ಗ್ರಾ.ಪಂ ನಲ್ಲಿ ಚುನಾವಣೆ ನಡೆಯಲಿದೆ. ಬೈಂದೂರು ವಿಧಾನಸಭಾ ವ್ಯಾಪ್ತಿಯ 39 ಪಂಚಾಯತ್ ನಲ್ಲೂ ಬಿಜೆಪಿ ಮೇಲುಗೈ ಸಾಧಿಸುವ ವಾತಾವರಣವಿದೆ. 39 ಪಂಚಾಯತ್ ನಲ್ಲಿ ನೂರಕ್ಕೆ ನೂರು ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯುತ್ತಾರೆ. ಖಂಡಿತವಾಗಿಯೂ ಗ್ರಾಮ ಮಟ್ಟದಲ್ಲಿ ಪಾರದರ್ಶಕ ಆಡಳಿತವನ್ನು ಕೊಡುತ್ತೇವೆ. ಆದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿಯಲು ಮತದಾರರಿಗೆ ಸಚಿವ ಕೋಟ ಮನವಿ ಮಾಡಿದರು.

ಕೋವಿಡ್ ನಿಂದಾಗಿ ರದ್ದುಗೊಂಡಿದ್ದ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಸಪ್ತಪದಿ ಯೋಜನೆಯನ್ನು ಪ್ರತೀ ತಿಂಗಳು ನಡೆಸುವ ಯೋಚನೆ ಇದೆ. ಮೊದಲ ಹಂತವಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ನಡೆಸುತ್ತೇವೆ. ಜನವರಿ ಹಗೂ ಫೆಬ್ರವರಿ ತಿಂಗಳಲ್ಲಿ ಎರಡೆರಡು ಬಾರಿ ಸಪ್ತಪದಿ ಕಾರ್ಯಕ್ರಮ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಮೊದಲೆರಡು ತಿಂಗಳು ಯಶಸ್ವಿಯಾದರೆ ಅದನ್ನು ಪ್ರತೀ ತಿಂಗಳಿಗೂ ಮುಂದುವರೆಸುತ್ತೇವೆ. ಒಂದೇ ಸಲ ನಡೆಸಿದರೆ ಜನಜಂಗುಳಿಯ ಸಾಧ್ಯತೆಯೂ ಇದ್ದು, ಕೋವಿಡ್ ನಿಯಮ ಮನಗಂಡು ಪ್ರತೀ ತಿಂಗಳಿಗೂ ನಡೆಸುವ ನಿರ್ಧಾರ ಇದೆ. ಹೀಗೆ ಮಾಡಿದರೆ ಜನಜಂಗುಳಿಯನ್ನು ನಿಯಂತ್ರಿಸಬಹುದು ಎಂದು ಹೇಳೀದರು.

ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ವಿಲೀನ ವಿಚಾರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ, ಇದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ಈ ಬಗ್ಗೆ ಹಿರಿಯ ಮುಖಂಡರು ತೀರ್ಮಾನಿಸುತ್ತಾರೆ, ಕಳೆದೆರಡು ದಿನಗಳಿಂದ ವಿಲೀನ‌ವಿಚಾರ ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ಗಮನಿಸಿದ್ದೇನೆ, ಇದು ಬಿಟ್ಟರೆ ನನಗೆ ಬೇರೇನು ಗೊತ್ತಿಲ್ಲ ಎಂದು ಸಚಿವ ಕೋಟ ಸ್ಪಷ್ಟಪಡಿಸಿದರು.

Comments are closed.