ಕರಾವಳಿ

2020 ನೇ ಸಾಲಿನ `ಯಕ್ಷಗಾನ ಅಕಾಡೆಮಿ ಪ್ರಶಸ್ತಿ’ ಪುರಸ್ಕೃತ ಪಟ್ಟಿ ಪ್ರಕಟ : ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ

Pinterest LinkedIn Tumblr

ಬೆಂಗಳೂರು / ಮಂಗಳೂರು, ಡಿಸೆಂಬರ್.21:ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2020 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪಟ್ಟಿ ಬಿಡುಗಡೆಯಾಗಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸರ್ಕಾರದ ನಿಯಮಾನುಸಾರ ಒಬ್ಬ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ 5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲು ಅವಕಾಶವಿದ್ದು, ಅದರಂತೆ ಆಯ್ಕೆ ಮಾಡಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು  ಅಕಾಡೆಮಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಕೆಳಕಂಡ ಗಣ್ಯರನ್ನು ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಗಳಾದ ಶ್ರೀ ಡಿ.ಎಸ್.ಶ್ರೀಧರ್ ಅವರನ್ನು ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ ರೂ.1.00ಲಕ್ಷ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

‘ಗೌರವ ಪ್ರಶಸ್ತಿ’ಗೆ 5 ಜನ ಗಣ್ಯರನ್ನು (ಶ್ರೀ ಬಿ.ಸಂಜೀವ ಸುವರ್ಣ, ಶ್ರೀ ಕೆ.ತಿಮ್ಮಪ್ಪ ಗುಜರನ್, ಡಾ. ವಿಜಯ ನಳಿನಿ ರಮೇಶ್, ಡಾ. ಚಕ್ಕೆರೆ ಶಿವಶಂಕರ್, ಶ್ರೀ ಬಿ.ಪರಶುರಾಮ್) ಆಯ್ಕೆ ಮಾಡಲಾಯಿತು. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000/-ಗಳ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ 10 ಜನ ಗಣ್ಯರನ್ನು (ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಶ್ರೀ ಬೇಲ್ತೂರು ರಮೇಶ್, ಶ್ರೀ ಆವರ್ಸೆ ಶ್ರೀನಿವಾಸ ಮಡಿವಾಳ, ಶ್ರೀ ಹರಿನಾರಾಯಣ ಬೈಪಾಡಿತ್ತಾಯ, ಶ್ರೀ ಸಂಜಯ್ ಕುಮಾರ್ ಶೆಟ್ಟಿ, ಶ್ರೀ ಎಂ.ಆರ್.ಹೆಗಡೆ ಕಾನಗೋಡ, ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಶ್ರೀ ವಿಟ್ಲ ಶಂಭು ಶರ್ಮ, ಶ್ರೀ ಹನುಮಂತರಾಯಪ್ಪ, ಶ್ರೀ ಎ.ಎಂ.ಮುಳವಾಗಲಪ್ಪ) ಅವರುಗಳನ್ನು ಆಯ್ಕೆ ಮಾಡಲಾಗಿದೆ. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000/-ಗಳ ನಗದು, ಪ್ರಮಾಣಪತ್ರ, ಹಾರ, ಶಾಲು ಪೇಟ ನೀಡಿ ಪುರಸ್ಕರಿಸಲಾಗುವುದು.

‘ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು 2021ರ ಫೆಬ್ರವರಿ 2ನೇ ಅಥವಾ 3ನೇ ವಾರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಅಥವಾ ನಯನ ರಂಗಮಂದಿರದಲ್ಲಿ ಇಲಾಖಾ ಸಚಿವರು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಸಚಿವರ, ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕವನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.

ಸಭೆಯಲ್ಲಿ ಪ್ರೊ. ಎಂ.ಎ.ಹೆಗಡೆ- ಅಧ್ಯಕ್ಷರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಎಸ್.ಹೆಚ್.ಶಿವರುದ್ರಪ್ಪ – ರಿಜಿಸ್ಟ್ರಾರ್ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ರಾಧಾಕೃಷ್ಣ ಕಲ್ಚಾರ್ – ಸದಸ್ಯರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕದ್ರಿ ನವನೀತ ಶೆಟ್ಟಿ – ಸದಸ್ಯರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ದಾಮೋದರ ಶೆಟ್ಟಿ -ಸಹ ಸದಸ್ಯರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.

Comments are closed.