ಕರಾವಳಿ

ಡಿ.21, 22: ಮಂಗಳೂರು ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜ್ಯಾರಿ

Pinterest LinkedIn Tumblr

ಮಂಗಳೂರು, ಡಿಸೆಂಬರ್.21: ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ನಡೆಯಲಿರುವ ಮಂಗಳೂರು ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿ ಐಪಿಸಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಹೊರಡಿಸಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ರವಿವಾರ ಆದೇಶ ಹೊರಡಿಸಿದ್ದಾರೆ.

ಗ್ರಾಪಂ ಚುನಾವಣೆ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ಅದೇಶ ಹೊರಡಿಸಲಾಗಿದ್ದು, ಡಿ.21ರಂದು ಬೆಳಗ್ಗೆ 8 ಗಂಟೆಯಿಂದ ಡಿ.22ರಂದು ಸಂಜೆ 5 ಗಂಟೆವರೆಗೆ ನಿಷೇಧಾಜ್ಞೆ ಚಾಲ್ತಿಯಲ್ಲಿರಲಿದೆ.

ಮತದಾನ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಮತದಾನ ಉದ್ದೇಶದಿಂದ ಮತ ಚಲಾಯಿಸಲು ಬರುವ ಮತದಾರರನ್ನು ಹೊರಡುಪಡಿಸಿ ಇತರ ವ್ಯಕ್ತಿಗಳಿಗೆ ಸಕಾರಣವಿಲ್ಲದೇ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಯಾವುದೇ ಆಯುಧ, ಕಡುಗೋಲು, ಖಡ್ಗ, ಭರ್ಚಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಯಾವುದೇ ವಸ್ತುಗಳನ್ನು ಹೊಂದುವುದು ಹಾಗೂ ಸಾಗಿಸುವುದು ನಿಷಿದ್ಧ. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದು, ಸಂಜ್ಞೆ, ಚಿತ್ರಗಳ ಪ್ರದರ್ಶನ, ಪ್ರಸಾರ, ಪತ್ರಿಕಾ ಪ್ರಕಟನೆ, ಭಿತ್ತಿಪತ್ರ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Comments are closed.