ಕರಾವಳಿ

ಸುಖಾಂತ್ಯ ಕಂಡ ಉಜಿರೆ ಉದ್ಯಮಿ ಪುತ್ರನ ಅಪಹರಣ ಪ್ರಕರಣ : ಬಾಲಕನ ರಕ್ಷಣೆ – ಏಳು ಮಂದಿ ಸೆರೆ

Pinterest LinkedIn Tumblr

ಮಂಗಳೂರು / ಬೆಳ್ತಂಗಡಿ, 19 : ಉಜಿರೆಯ ಉದ್ಯಮಿ ಪುತ್ರನನ್ನು ಅಪಹರಣ ಮಾಡಿದ ಅಪಹರಣ ಕಾರರನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಈ ಮೂಲಕ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.

ಮಾಜಿ ಸೈನಿಕ ಶಿವನ್​ ಎಂಬವರ ಮಗ ಉಜಿರೆಯ ಉದ್ಯಮಿ ಬಿಜೋಯ್ ಎಂಬವರ 8 ವರ್ಷದ ಮಗ ಅನುಭವ್​ನನ್ನು ಅಪಹರಿಸಲಾಗಿತ್ತು. ಗುರುವಾರ ಸಂಜೆ 6.30ರ ಸುಮಾರಿಗೆ ಅನುಭವ್​ನನ್ನು ಹಳದಿ ಪ್ಲೇಟ್ ನಂಬರ್​ನ ಇಂಡಿಕಾ ಕಾರ್​ನಲ್ಲಿ ಅಪಹರಿಸಲಾಗಿತ್ತು. ನಿನ್ನೆ ಬಿಜೋಯ್ ಪತ್ನಿ ಸರಿಯಾ ಬಿಜೋಯ್ ಗೆ ಕರೆ ಮಾಡಿರುವ ಅಪಹರಣಕಾರರು ಮೊದಲಿಗೆ 17 ಕೋಟಿ ರೂಪಾಯಿಗೆ ಬಳಿಕ 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಇದೀಗ ಅನುಭವ್ ನನ್ನು ಕೋಲಾರದಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಪೊಲೀಸ್​ ತಂಡದಿಂದ ವಿಶೇಷ ಕಾರ್ಯಾಚರಣೆ:

ಪ್ರಕರಣ ದಾಖಲಾಗುತ್ತಿದ್ದಂತೆ ತೀವ್ರ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್​ ತಂಡ ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಸದ್ಯ ಆರೋಪಿಗಳನ್ನು ಮಾಸ್ತಿ ಠಾಣೆಯಲ್ಲಿ ಬಂಧಿಸಿಡಲಾಗಿದೆ.

ಕೋಲಾರ ಜಿಲ್ಲೆಯ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5ರ ಹೊತ್ತಿಗೆ ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನೂ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು ಕೋಲಾರದಿಂದ ವಿಶೇಷ ತನಿಖಾ ತಂಡ ಪ್ರಯಾಣ ಆರಂಭಿಸಿದೆ.

ಕೋಲಾರದ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಮಂಜುನಾಥ್ ಎಂಬಾತನ ಮನೆಯಲ್ಲಿ ಮಗುವನ್ನು ಬಚ್ಚಿಡಲಾಗಿತ್ತು. ಆತನ ಮೊಬೈಲ್ ಅನ್ನು ಉಪಯೋಗಿಸಿ ಅಪಹರಣಕಾರರು ಕರೆ ಮಾಡಿದ್ದಾರೆ ಎನ್ನಲಾಗಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈತನನ್ನು ವಶಕ್ಕೆ ಪಡೆದು ಅಪರಹಣವನ್ನ ಪತ್ತೆಹಚ್ಚಿದ್ದಾರೆ. ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿಂದ‌ ಮಂಗಳೂರಿನ ಪೊಲೀಸ್ ತಂಡ ಬಂಧನ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಮಂಡ್ಯದ ಗಂಗಾಧರ್ ಸೇರಿದಂತೆ ನಾಲ್ವರು ಕಿಡ್ನಾಪರ್ಸ್ ಎಂದು ಪ್ರಾಥಮಿಕ ವರದಿ ಇದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಅಪಹರಣಕಾರರಿಗೆ ಸಹಕಾರ ನೀಡಿದ್ದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮಹೇಶ್ ಸಹ ‌ಬಂಧನವಾಗಿದ್ದಾರೆ. ಕಿಡ್ನ್ಯಾಪ್​ ಮಾಡಿದ ತಂಡದ ಕೋಮಲ್ ಹಾಗೂ ಮಹೇಶ್ ಸ್ನೇಹಿತರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಡ್ರೈವರ್ ಆಗಿದ್ದ ಮಹೇಶ್​ಗೆ ಕೋಮಲ್ ‌ಪರಿಚಯ. ಕಳೆದ‌ ರಾತ್ರಿಯಷ್ಟೇ‌ ಕೋಲಾರದ ಕೂರ್ನಹೊಸಳ್ಳಿ ಗ್ರಾಮಕ್ಕೆ ಮಗುವಿನೊಂದಿಗೆ ಬಂದಿದ್ದರು. ಈ ವೇಳೆ ಮಂಜುನಾಥ್ ಎಂಬುವರ‌ ಮೊಬೈಲ್ ಬಳಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ

ಊರಿನ ಜನರನ್ನು ಭಯಭೀತರನ್ನಾಗಿ ಮಾಡಿದ್ದ ಅಪಹರಣ ಪ್ರಕರಣದಲ್ಲಿ ಪೊಲೀಸರು 36 ಗಂಟೆಗಳಲ್ಲಿ ಯಶಸ್ವಿ ಕಾರ್ಯಾಚರಣೆಯ ಮೂಲಕ ಮಗುವನ್ನು ಯಾವುದೇ ಅಪಾಯವಿಲ್ಲದೆ ಪಾರು ಮಾಡಿ ಆರೋಪಿಗಳನ್ನು ಬಂಧಿಸಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.

Comments are closed.