ಕರಾವಳಿ

ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ : ಆರ್‌ಎಸ್‌ಎಸ್ ಮುಖಂಡ ವೆಂಕಟರಮಣ ಹೊಳ್ಳ ಮೃತ್ಯು

Pinterest LinkedIn Tumblr

ಮಂಗಳೂರು / ಪುತ್ತೂರು: ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ಆರ್‌ಎಸ್‌ಎಸ್  ಮುಖಂಡ ರೊಬ್ಬರು ಮೃತಪಟ್ಟ ಘಟನೆ ಪುತ್ತೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಬಿ.ಸಿ.ರೋಡಿನ ಅಗ್ರಬೈಲ್ ನಿವಾಸಿ, ಆರೆಸ್ಸೆಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖರೂ ಆಗಿದ್ದ ವೆಂಕಟರಮಣ ಹೊಳ್ಳ (60) ಎಂದು ಹೆಸರಿಸಲಾಗಿದೆ.

ಸೋಮವಾರ ಆರೆಸ್ಸೆಸ್ ಬೈಠಕ್ ಮುಗಿಸಿ ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು, ಮಂಗಳವಾರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಬಿ.ಸಿ.ರೋಡಿನ ಅಗ್ರಬೈಲ್ ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಪೋಳ್ಯದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ವೆಂಕಟ್ರಮಣ ಹೊಳ್ಳ ಅವರು ಪುತ್ತೂರಿನಿಂದ ಬಂಟ್ವಾಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಬಕ ಸಮೀಪದ ಪೋಳ್ಯದಲ್ಲಿ ಅಳವಡಿಸಿರುವ ಡಿವೈಡರ್ ಬಳಿ ಈ ಅಪಘಾತ ಸಂಭವಿಸಿದೆ. ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ಅವರು ಸಂಚರಿಸುತ್ತಿದ್ದ ಬೈಕ್ ಪತ್ತೆಯಾಗಿದೆ.

ಆರೆಸ್ಸೆಸ್ ಕಾರ್ಯಕರ್ತರಾಗಿ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಅವರು ಸಂಘಟನೆಯ ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದವರು. ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೂ ವೆಂಕಟರಮಣ ಹೊಳ್ಳರು ಗುರು, ಮಾರ್ಗದರ್ಶಕರಾಗಿದ್ದರು. ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನಳಿನ್ ಪಡೆದಿದ್ದರು.

ಇತ್ತೀಚೆಗೆ ಗ್ರಾಮ ವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಚಾಲಕರಾಗಿ ಬಿ.ಸಿ.ರೋಡ್, ಸುಳ್ಯ, ಪುತ್ತೂರು ಸಹಿತ ಹಲವೆಡೆ ಯುವಕರಿಗೆ ಆತ್ಮನಿರ್ಭರರಾಗುವ ಉದ್ಯೋಗ ತರಬೇತಿ ಆಯೋಜಿಸುವ ಮೂಲಕ ವೆಂಕಟರಮಣ ಹೊಳ್ಳ ಗಮನ ಸೆಳೆದಿದ್ದರು.

Comments are closed.