ಕರಾವಳಿ

ಮಂಗಳೂರಿನಲ್ಲಿ ಜಿಲ್ಲೆಯ ಮೊದಲ ದೋಣಿ ವಿಹಾರ ಕೇಂದ್ರ ಆರಂಭ : ನಾಲ್ಕು ದೋಣಿಗಳ ಮೂಲಕ ನದಿ ಸುತ್ತುವ ಅವಕಾಶ

Pinterest LinkedIn Tumblr

ಮಂಗಳೂರು, ಡಿಸೆಂಬರ್.15: ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮೃದ್ಧಿ ವಾಟರ್ ಸ್ಪೋಟ್ಸ್ ಆಶ್ರಯದಲ್ಲಿ ನಗರದ ಕೂಳೂರು ಸಮೀಪ ತಣೀರು ಬಾವಿ ರಸ್ತೆಯಲ್ಲಿ ಜಿಲ್ಲೆಯ ಮೊದಲ ದೋಣಿ ವಿಹಾರ ಕೇಂದ್ರವನ್ನು ಆರಂಭಿಸುತ್ತಿದ್ದೇವೆ ಎಂದು ಸಮೃದ್ಧಿ ವಾಟರ್ ಸ್ಪೋಟ್ಸ್‌ನ ಮುಖ್ಯಸ್ಥರಾದ ಪಿ.ಶಿವಕುಮಾರ್ ಪೈಲೂರು ತಿಳಿಸಿದ್ದಾರೆ.

ದೋಣಿ ವಿಹಾರ ಕೇಂದ್ರದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬಂದರು ನಗರಿ ಎಂದೇ ಹೆಸರು ಪಡೆದಿರುವ ಮಂಗಳೂರಿನಲ್ಲಿ ನದಿ ಸಮುದ್ರ ಕಿನಾರೆಗಳೇ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ವಿಷಯ. ಇದನ್ನೇ ಬಳಸಿಕೊಳ್ಳುವ ಉದ್ದೇಶದಿಂದ ಮಂಗಳೂರಿನಲ್ಲಿ ಜಿಲ್ಲೆಯ ಮೊದಲ ದೋಣಿ ವಿಹಾರ ಕೇಂದ್ರ ಆರಂಭಿಸುತ್ತಿದ್ದೇವೆ.

ಈಗಾಗಲೇ ದೇಶದ ಇತರೆಡೆಗಳಲ್ಲಿ ಹಾಗೂ ಕೇರಳದಲ್ಲಿ ಖ್ಯಾತಿ ಪಡೆದಿರುವ ದೋಣಿ ವಿಹಾರ ಕೇಂದ್ರವನ್ನು ಮಂಗಳೂರಿನಲ್ಲೂ ಸ್ಥಾಪಿಸಬೇಕೆಂಬ ಉದ್ದೇಶದಿಂದ ಮಂಗಳೂರಿನ ಪ್ರಮುಖ ಪ್ರವಾಸಿ ಸ್ಥಳವಾದ ತಣ್ಣೀರುಬಾವಿ ಸಮುದ್ರ ಕಿನಾರೆಗೆ ಸಾಗುವ ದಾರಿಯಲ್ಲಿ ಕೂಳೂರು ಸೇತುವೆ ಸಮೀಪದಲ್ಲೇ ಸಮೃದ್ಧಿ ವಾಟರ್ ಸ್ಪೋಟ್ಸ್ ಶೀಘ್ರ ಕಾರ್ಯಾಚರಿಸಲಿದೆ.

ದೋಣಿ ವಿಹಾರ ಕೇಂದ್ರ ಆರಂಭವಾಗಲಿರುವ ಜಾಗ ಜನ ಸಂಚಾರ ವಿರಳವಾಗಿದ್ದ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿತ್ತು. ಇದನ್ನು ಅಭಿವೃದ್ಧಿಗೊಳಿಸಿ ಪ್ರವಾಸಿತಾಣವಾಗಿ ಬದಲಾಯಿಸಲಾಗಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸರಕಾರ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಹಲವಾರು ನೂತನ ಕಾರ್ಯಕ್ರಮಗಳನ್ನು‌ಆಯೋಜನೆ ಮಾಡುವಲ್ಲಿ ಮುಂದಡಿ ಇಡುತ್ತಿದೆ. ಕರಾವಳಿ ಜಿಲ್ಲೆಯತ್ತ ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶದ ಪ್ರವಾಸಿಗರನ್ನು ಸೆಳೆಯಲು ಬೇಕಾದ ವ್ಯವಸ್ಥೆಗಳನ್ನು ರೂಪಿಸಲು ಆಸಕ್ತರಿಗೆ ಉತ್ತೇಜನ ನೀಡುತ್ತಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಹೋಟೆಲ್, ಸಾರಿಗೆ ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತದೆ. ಇದರಿಂದ ಹೆಚ್ಚಿನ ಉದ್ಯೋಗವಕಾಶಗಳು ಹುಟ್ಟಿಕೊಳ್ಳುತ್ತವೆ. ಮಹಾಮಾರಿ ಕೊರೊನಾದಿಂದ ಏರುಪೇರಾಗಿರುವ ವಾಣಿಜ್ಯ ಉದ್ಯಮಗಳನ್ನು ಸಹಜ ಸ್ಥಿತಿಯತ್ತ ತರುವಲ್ಲಿ ಹೊಸ ಯೋಜನೆಗಳ ಜಾರಿ ಅವಶ್ಯಕ ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮೂಲಕ ಇತರ ಜಿಲ್ಲೆಯ ಜನರನ್ನು ಜಿಲ್ಲೆಯತ್ತ ಸೆಳೆಯಲು ಸಂಬಂಧಪಟ್ಟ ಇಲಾಖೆಗಳು ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

ತುಳುನಾಡಿನ ಪ್ರಮುಖ ನದಿಗಳಾದ ಕುಮಾರಧಾರ, ನೇತ್ರಾವತಿ, ಪಯಸ್ವಿನಿ, ಫಲ್ಗುಣಿ ಹೆಸರುಗಳಿರುವ ಸುಂದರ ಹಾಗೂ ಆಕರ್ಷಕವಾಗಿ ಸಿಂಗಾರಗೊಂಡ ನಾಲ್ಕು ದೋಣಿಗಳು ಕೂಳೂರಿನಿಂದ ಉಳ್ಳಾಲ ಹಾಗೂ ಮರವೂರು ಹೊಳೆವರೆಗೆ ಪ್ರಯಾಣಿಕರನ್ನು ಕೊಂಡೊಯ್ಯಲಿದೆ.

ಎಲ್ಲಾ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ನಾಲ್ಕು ದೋಣಿಗಳು ಪ್ರವಾಸಿಗರನ್ನು ನದಿಯಲ್ಲಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಕಲ್ಪಿಸಿ ಕೊಂಡೊಯ್ಯಲಿದೆ.

ಒಂದು ದೋಣಿಯಲ್ಲಿ 25 ಜನರನ್ನು ಕೊಂಡೊಯ್ಯಲು ಅವಕಾಶವಿದ್ದರೂ, ಕೋವಿಡ್ ಮಾರ್ಗಸೂಚಿ ಗಳನ್ನು ಅನುಸರಿಸಿಕೊಂಡು 12 ಮಂದಿಯನ್ನು ಏಕಕಾಲದಲ್ಲಿ ಕೊಂಡೊಯ್ಯಲಾಗುತ್ತದೆ.

ಇದರೊಂದಿಗೆ ದೋಣಿಯ ಸಾರಂಗ(ಚಾಲಕ) ಹಾಗೂ ಒಬ್ಬ ಲೈಫ್‌ಗಾರ್ಡ್ ಜತೆಗಿರುತ್ತಾನೆ. ಅಲ್ಲದೆ ಸಂಚರಿಸುವ ಎಲ್ಲಾ ಜನರು ಲೈಫ್‌ಜಾಕೆಟ್ ಬಳಸುವುದು ಕಡ್ಡಾಯವಾಗಿರುತ್ತದೆ.

ಬೆಳಗ್ಗೆ ೯ರಿಂದ ಸಂಜೆ 6.30ರವರೆಗೆ ದೋಣಿವಿಹಾರ ಅವಕಾಶ ಕಲ್ಪಿಸಲಾಗಿದೆ. ದೋಣಿ ಸಂಚರಿಸಲು ಆರಂಭಿಸಿದ ಬಳಿಕ ಆಹಾರ ಅಥವಾ ಏನೇ ತುರ್ತು ಸಂದರ್ಭಗಳು ಎದುರಾದಲ್ಲಿ ಹೆಚ್ಚುವರಿ ಬೋಟ್ ಮೂಲಕ ತಲುಪಿಸುವ ಕೆಲಸ ಮಾಡಲಾಗುತ್ತದೆ.

ಎನ್‌ಎಂಪಿಟಿ ಸ್ವಾಮ್ಯದ ಜಿಲ್ಲಾಡಳಿತ ಗುತ್ತಿಗೆ ಪಡೆದುಕೊಂಡ ಮೂರುವರೆ ಎಕರೆ ಜಾಗದಲ್ಲಿ ಪಿ.ಶಿವಕುಮಾರ್ ಪೈಲೂರು ಹಾಗೂ ಕುಶಲ್ ಪೂಜಾರಿ ಪಾಲುದಾರಿಕೆಯಲ್ಲಿ ಲೀಝ್ ಪಡೆದುಕೊಂಡು ದೋಣಿ ವಿಹಾರ ಕೇಂದ್ರವನ್ನು ಆರಂಭಿಸಿದೆ. ಸುಮಾರು 1.3 ಕೋ.ರೂ. ವೆಚ್ಚದಲ್ಲಿ ಆರಂಭಿಸಲಾದ ದೋಣಿ ವಿಹಾರ ಕೇಂದ್ರಗಳಿಗೆ ಆಗಮಿಸುವವರಿಗೆ ವಿಶಾಲ ವಾಹನ ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಫೋಟೋ ಕಾರ್ನರ್ ಮಾಡಲಾಗಿದೆ. ಇದರೊಂದಿಗೆ ನದಿಯಲ್ಲಿ ಮೀನುಗಳಿಗೆ ಗಾಳ ಹಾಕುವ ವ್ಯವಸ್ಥೆ ಕಲ್ಪಿಸಲಾಗಿದೆ.

ದೋಣಿ ವಿಹಾರಕ್ಕೆ ತೆರಳಲಿರುವ ನಾಲ್ಕು ದೋಣಿಗಳನ್ನು ಕೇರಳದ ನುರಿತ ತಜ್ಞ ರಿಂದ ಅಲಂಕರಿಸಲಾಗಿದೆ, ಪ್ರಯಾಣಿಕರ ಸುರಕ್ಷತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಜೆ 6.30ರ ಬಳಿಕ ದೋಣಿ ಸಂಚಾರ ಇಲ್ಲದ ಕಾರಣದಿಂದ ತಟದಲ್ಲಿ ಪ್ರೊಜೆಕ್ಟರ್ ಮೂಲಕ ತುಳುನಾಡ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಯಕ್ಷಗಾನ, ತುಳು ಸಿನೆಮಾ, ಸಂಗೀತ ಕಾರ್ಯಕ್ರಮಗಳನ್ನು ತೋರಿಸಲಾಗುತ್ತದೆ. ಜತೆಗೆ ವಿಕಲ ಚೇತನ, ಅಂಗವಿಕಲ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ.

ನದಿ ವಿಹಾರ ಕೇಂದ್ರ ಆರಂಭಿಸಲು ಕರ್ನಾಟಕ ಸರಕಾರ, ಜಿಲ್ಲಾಧಿಕಾರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಅದಕ್ಕಾಗಿ ಬೇಕಾದ ಎಲ್ಲಾ ಸಹಕಾರವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಅನುಮತಿ ದೊರೆತಲ್ಲಿ ನದಿ ತಟದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಆಲೋಚನೆ ಇದೆ. ಆದರೊಂದಿಗೆ ಹೌಸ್ ಬೋಟು ಸೇರಿದಂತೆ ಇತರ ಹೊಸ ಯೋಜನೆಗಳನ್ನು ಮಾಡಲು ಶ್ರಮ ವಹಿಸಲಾಗುತ್ತದೆ ಎಂದು ಕೇಂದ್ರದ ಪ್ರವರ್ತಕರಾದ ಪಿ.ಶಿವಕುಮಾರ್ ಪೈಲೂರು ಅವರು ಸಂಪೂರ್ಣ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲುದಾರರಾದ ಕುಶಲ್ ಪೂಜಾರಿ, ಶ್ರೀಮತಿ ಪುಷ್ಪಲಾತಾ ಶಿವಕುಮಾರ್ ಪೈಲೂರು, ಶ್ರೀಮತಿ ಜ್ಯೋತಿ ಕುಶಲ್ ಪೂಜಾರಿ, ಸಲಹೆಗಾರರಾದ ನಾರಾಯಣ ಅಂಚನ್, ಸಹಕಾರ ನೀಡಿದ ದಿನೇಶ್ ಮುಂತಾದವರು ಉಪಸ್ಥಿತರಿದ್ದರು.

__ ಸತೀಶ್ ಕಾಪಿಕಾಡ್ (SK)

Comments are closed.