ಕರಾವಳಿ

ಉಗ್ರರ ಪರ ಪ್ರಚೋದನಕಾರಿ ಗೋಡೆಬರಹ ಪ್ರಕರಣ : ನಾಲ್ಕನೇ ಆರೋಪಿಯ ಬಗ್ಗೆ ಮಾಹಿತಿ

Pinterest LinkedIn Tumblr

ಮಂಗಳೂರು, ಡಿಸೆಂಬರ್.15 : ಬಿಜೈನ ಪಾರ್ಟ್‌ಮೆಂಟ್‌ನ ಗೋಡೆಯ ಮೇಲೆ ಮತ್ತು ನ್ಯಾಯಾಲಯದ ಸಮೀಪದಲ್ಲಿದ್ದ ಗೋಡೆಯ ಮೇಲೆ ಉಗ್ರರ ಪರ ಪ್ರಚೋದನಕಾರಿ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಚೋದನಕಾರಿ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಕೂಡ ಶಾಮೀಲಾಗಿರುವುದು ಕಂಡುಬಂದಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಪ್ರತಿಯೊಂದು ದೃಷ್ಟಿಕೋನದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದು ತನಿಖೆ ಆರಂಭಿಕ ಹಂತದಲ್ಲಿರುವುದರಿಂದ, ಒಂದು ತೀರ್ಮಾನಕ್ಕೆ ಬರುವುದು ತುಂಬಾ ಕಷ್ಟ ಎಂದು ಆಯುಕ್ತರು ಹೇಳಿದ್ದಾರೆ.

ಇತ್ತೀಚೆಗೆ ಬಂಧಿತನಾದ ತೀರ್ಥಹಳ್ಳಿಯ ಸಾದತ್ (50) ಎಂಬವರನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ವರದಿ ಬಂದಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಮನವಿ ಮಾಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಗಳ ಹುಡುಕಾಟ ನಡೆದಿದೆ. ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೆ ತಾಂತ್ರಿಕ ಸಾಕ್ಷ ಕೂಡ ಮಹತ್ವದ್ದಾಗಿದ್ದು, ಅವುಗಳನ್ನೂ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಲಾಖೆಯಿಂದ ನಗರದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳಲ್ಲಿ ಹಾಳಾದವುಗಳನ್ನು ದುರಸ್ತಿಗೆ ಕಳುಹಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅವುಗಳನ್ನು ಪುನರ್ ಸ್ಥಾಪಿಸಲಾಗುತ್ತದೆ. ನಗರದಲ್ಲಿ 18,500 ಸಿಸಿಟಿವಿ ಕ್ಯಾಮೆರಾಗಳಿವೆ ಎಂದು ಆಯುಕ್ತರು ಮಾಹಿತಿ ನೀಡಿದರು. ಆದರೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದವರು ಅದರ ನಿರ್ವಹಣೆಗೆ ಮಹತ್ವ ನೀಡಬೇಕಾಗಿದೆ. ಮುಂದಿನ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ವಿಕಾಶ್ ಕುಮಾರ್ ಹೇಳಿದರು.

Comments are closed.