ಕರಾವಳಿ

ಬಸ್ಸಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ ಪ್ರಯಾಣಿಕ ದೋಷಿ ಎಂದು ನ್ಯಾಯಾಲಯ ತೀರ್ಪು

Pinterest LinkedIn Tumblr

ಉಡುಪಿ: ಉಡುಪಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಸಹ ಪ್ರಯಾಣಿಕ ಪೋಕ್ಸೋ ಪ್ರಕರಣದಲ್ಲಿ ದೋಷಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

2014ರ ಅಕ್ಟೋಬರ್ 10ರಂದು ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ನೂರ್ ಅಹಮ್ಮದ್ ಎಂಬಾತನು ಬಸ್ಸಿನಲ್ಲಿ ಈ ವಿಕ್ರತಿ ತೋರಿದ್ದ. ಶೈಕ್ಷಣಿಕ ವಿಚಾರದಲ್ಲಿ ಉಡುಪಿ ಬಂದು ವಾಪಾಸ್ ಮನೆಗೆ ಬಸ್ಸಿನಲ್ಲಿ ತೆರಳುತ್ತಿದ್ದ 16 ವರ್ಷದ ಬಾಲಕಿಗೆ ಮೊಬೈಲ್ ಫೋನಿನಲ್ಲಿ ತನ್ನ ಮೊಬೈಲ್ ಸಂಖ್ಯೆ ಟೈಪ್ ಮಾಡಿ ಆ ನಂಬರ್ ತೋರಿಸುತ್ತಾ ಕಣ್ಣು ಸನ್ನೆ ಮೂಲಕ ಕಿರುಕುಳ ನೀಡಿದ್ದ. ಬಾಲಕಿ ಈ ಬಗ್ಗೆ ಮಾಹಿತಿ ನೀಡಿದಾಗ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೋಕ್ಸೋ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂದಿನ ಪಡುಬಿದ್ರಿ ಠಾಣಾ ಪಿಎಸ್ಐ ಅಜ್ಮತ್ ಅಲಿ ಜಿ. ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ಒಟ್ಟು 12 ಮಂದಿ ಸಾಕ್ಷಿಗಳ ಪೈಕಿ 8 ಮಂದಿ ವಿಚಾರಣೆ ನಡೆಸಲಾಗಿತ್ತು. ಬಸ್ಸಿನಲ್ಲಿದ್ದ ಸಹಪ್ರಯಾಣಿಕರು ಹಾಗೂ ಸಂತ್ರಸ್ತ ಬಾಲಕಿ ಅಭಿಯೋಜನೆಗೆ ಪೂರಕವಾಗಿ ಸಾಕ್ಷ್ಯ ನುಡಿದಿದ್ದರು. ಆರೋಪಿ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳು ರುಜುವಾತಾಗಿದ್ದು ಆತ ದೋಷಿ ಎಂದು ತೀರ್ಪು ನೀಡಿ ನ್ಯಾಯಾಲಯ ಆದೇಶಿಸಿದೆ.

ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Comments are closed.