ಕರಾವಳಿ

ಸಾಂಸ್ಕೃತಿಕ ಕ್ಷೇತ್ರಕ್ಕೆ ಮುಂಬೈ ತುಳು – ಕನ್ನಡಿಗರದು ಅಪೂರ್ವ ಕೊಡುಗೆ: ಕಟೀಲು ಶ್ರೀ ಹರಿ ಆಸ್ರಣ್ಣ

Pinterest LinkedIn Tumblr

ಕಲಾ ಸೌರಭ ದಿಂದ ಸಾಧಕ ಸನ್ಮಾನ – ಕವಿ-ಕಾವ್ಯ ಸಂಗಮ

ಮಂಗಳೂರು: ‘ಕರ್ನಾಟಕ ಹಾಗೂ ಕರಾವಳಿ ಭಾಗದ ಪ್ರತಿಭಾವಂತ ಕಲಾವಿದರು ಮತ್ತು ಸಂಘಟಕರು ಮಹಾರಾಷ್ಟ್ರದ ಮಣ್ಣಿನಲ್ಲಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ಅಭಿಮಾನದ ವಿಚಾರ. ಅದರಲ್ಲೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತುಳು – ಕನ್ನಡಿಗರ ಅಪೂರ್ವ ಕೊಡುಗೆ ಸಂದಿದೆ. ಅಂಥವರಲ್ಲಿ ಸಂಗೀತ ಸಾಧಕ ಹಾಗೂ ಸಂಘಟಕರಾದ ಪದ್ಮನಾಭ ಸಸಿಹಿತ್ಲು ಗಮನಾರ್ಹರು’ ಎಂದು ಕಟೀಲು ಕ್ಷೇತ್ರದ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಹೇಳಿದ್ದಾರೆ.

ಕಲಾ ಸೌರಭ ಮುಂಬೈ , ಸಂಗೀತ ಮತ್ತು ಸಾಂಸ್ಕೃತಿಕ ಘಟಕದ ಆಶ್ರಯದಲ್ಲಿ ಕಲಾ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರು ಮಂಗಳೂರಿನಲ್ಲಿ ಆಯೋಜಿಸಿದ ‘ಕವಿಗೋಷ್ಠಿ – ಕಾವ್ಯ ಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಾಧಕರ ಸನ್ಮಾನ:

ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಹಾಗೂ ಸಮಾಜಸೇವಕ ಕುಸುಮೋಧರ ಡಿ. ಶೆಟ್ಟಿ , ಲಿಂಗಪ್ಪ ಸೇರಿಗಾರ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಪ್ರಶಸ್ತಿ ಪಡೆದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಗಾಯಕ – ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರನ್ನು ಕಲಾಸೌರಭ ವತಿಯಿಂದ ಸನ್ಮಾನಿಸಲಾಯಿತು.

ಉದ್ಯಮಿಗಳಾದ ರವಿಕುಮಾರ್ ಪೂಜಾರಿ, ಬಿ.ವಿ.ರಾವ್ ಮುಂಬಯಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಅಧ್ಯಕ್ಷ ಮಹಮ್ಮದ್ ಇಕ್ಬಾಲ್,ರಾಗತರಂಗ ಮಂಗಳೂರು ಅಧ್ಯಕ್ಷ ವಾಮನ್ ಬಿ.ಮೈಂದನ್ ಮುಖ್ಯ ಅತಿಥಿಗಳಾಗಿದ್ದರು. ಸಾಹಿತಿ – ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ , ಸಂಗೀತ ಕಲಾವಿದರಾದ ಶೇಖರ್ ಸಸಿಹಿತ್ಲು ಮತ್ತು ಸತೀಶ್ ಸುರತ್ಕಲ್ ಉಪಸ್ಥಿತರಿದ್ದರು.

ಕಲಾಸೌರಭದ ಅಧ್ಯಕ್ಷ ಪದ್ಮನಾಭ ಸಸಿಹಿತ್ಲು ಸ್ವಾಗತಿಸಿದರು. ರಂಗ ಕಲಾವಿದ ಪರಮಾನಂದ ಸಸಿಹಿತ್ಲು ಪ್ರಸ್ತಾವನೆಗೈದರು. ರಂಗನಟ ಮತ್ತು ಉದ್ಯಮಿ ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಕವಿಗೋಷ್ಠಿ – ಕಾವ್ಯಗಾಯನ ಜರಗಿತು.

Comments are closed.