ಕರಾವಳಿ

ಮಗುವಿನ ಮೇಲಿನ ದೌರ್ಜನ್ಯ ತಡೆಯಲು ಮಕ್ಕಳ ಸಹಾಯವಾಣಿ -1098ಕ್ಕೆ ಕರೆ ಮಾಡಿ

Pinterest LinkedIn Tumblr

ಮಂಗಳೂರು ಡಿಸೆಂಬರ್ 11: ಪ್ರತಿಯೊಂದು ಮಗುವಿನ ಹಕ್ಕುಗಳ ಉಲ್ಲಂಘನೆಯಾಗಿದೆಂದು ತಿಳಿದಾಗ ಯಾವುದೇ ಹಿಂಜರಿಕೆಯನ್ನು ಮಾಡದೇ ಮಕ್ಕಳ ಸಹಾಯವಾಣಿ -1098 ತಕ್ಷಣ ಕರೆ ಮಾಡಿ ಮಾಹಿತಿ ನೀಡಿದರೆ ಮಗುವಿನ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ ಶಂಕರಪ್ಪ ಹೇಳಿದರು.

ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯುನಿಸೆಫ್ ಹೈದರಬಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಕ್ಕಳ ಹಕ್ಕು ಮತ್ತು ರಕ್ಷಣಾ ಕಾಯಿದೆಗಳನ್ನು ಅನುಷ್ಠಾನಕ್ಕೆ ತರುವ ಪ್ರಾಧಿಕಾರ ಮತ್ತು ಇಲಾಖೆಗಳ ಪಾತ್ರದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಗುವಿಗೆ ಬಾಲ್ಯ ವಿವಾಹ ನಡೆದಾಗ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಸಕ್ರಿಯಯಾಗಿ ಕಾರ್ಯನಿರ್ವಹಿಸಿ ಮಗುವಿನ ರಕ್ಷಣೆ ಮತ್ತು ಸೂಕ್ತ ಪುರ್ನವಸತಿಯನ್ನು ಕಲ್ಪಿಸಿ ಮಗುವನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಯಾವುದೇ ಬಾಲ್ಯವಿವಾಹ ನಡೆದಾಗ ಪ್ರಥಮ ವರ್ತಮಾನ ವರದಿ ದಾಖಲಿಸಲು ಇಲಾಖಾಧಿಕಾರಿಗಳು ಹಿಂದೇಟು ಹಾಕಬಾರದೆಂದು ತಿಳಿಸಿದರು.

ಬಾಲ್ಯ ವಿವಾಹ ನಿಷೇಧ ಮತ್ತು ನಿಯಂತ್ರಣಾ ಕಾಯಿದೆ – 2006 ರಂತೆ 18 ವರ್ಷದೊಳಗಿನ ಹೆಣ್ಣು ಮಗಳನ್ನು ಮದುವೆಯ ಬಂಧನದಿಂದ ಮುಕ್ತಿಗೊಳಿಸಿ ಸಂರಕ್ಷಣೆ ಮಾಡಲು ಇರುವ ಕಾನೂನು ಆಗಿರುತ್ತದೆ. ಬಾಲ್ಯ ವಿವಾಹ ನಡೆದಾಗ ವಿವಾಹ ಮಾಡಿದವರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶಿಕ್ಷೆಗೆ ಒಳಗಾಗುತ್ತಾರೆ. ಅಧಿಕಾರಿಗಳು ಬದ್ಧತೆ ಮತ್ತು ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನವಾಗಿ ಜಾರಿಗೆ ಬಂದು ಮಗುವಿಗೆ ನ್ಯಾಯಾ ಒದಗಿಸಲು ಸಾಧ್ಯ ಮತ್ತು ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿಯಬಾರದು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೈಲಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ಮಹಿಳಾ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ರೇವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು ನಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೋಭಾ ಸ್ವಾಗತಿಸಿ, ನಗರ ವಲಯದ ಮೇಲ್ವಿಚಾರಕಿ ಸುಧಾ ನಿರೂಪಿಸಿದರು.

Comments are closed.