ಕರಾವಳಿ

ಮನೆಯಲ್ಲಿ ಕುಸಿದು ಬಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ: ಆಸ್ಪತ್ರೆಗೆ ದಾಖಲು

Pinterest LinkedIn Tumblr

ಬೆಂಗಳೂರು : ಕರ್ನಾಟಕದ ಹೆಮ್ಮೆಯ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ತಮ್ಮ ಮನೆಯಲ್ಲಿ ಕುಸಿದು ಬಿದ್ದ ಪರಿಣಾಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಲೂರಿನ ತಮ್ಮ ಮನೆಯಲ್ಲಿ ಭಾನುವಾರ ಸಂಜೆ ಕುಸಿದು ಬಿದ್ದ ತಿಮ್ಮಕ್ಕ ಅವರನ್ನು ಮೊದಲಿಗೆ ಹಾಸನದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿಮ್ಮಕ್ಕ ಅವರ ಸೊಂಟದ ಮೂಳೆ ಮುರಿದು ಹೋಗಿದ ಎನ್ನಲಾಗಿದೆ. ಕೂಡಲೇ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.

ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಾಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಿಮ್ಮಕ್ಕ ಅವರಿಗೆ ಬುಧವಾರ ಅಥವಾ ಗುರುವಾರ ಅವರ ಸೊಂಟದ ಆಪರೇಷನ್ ನಡೆಸುವ ಸಾಧ್ಯತೆ ಇದೆ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಮಾಹಿತಿ ನೀಡಿದ್ದಾರೆ. ಸದ್ಯ ತಿಮ್ಮಕ್ಕ ಅವರು ಆರೋಗ್ಯವಾಗಿದ್ದಾರೆ ಎಂದು ದತ್ತುಪುತ್ರ ಉಮೇಶ್ ಸ್ಪಷ್ಟಪಡಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಕಳೆದ ಮೇ ತಿಂಗಳಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಹೊಟ್ಟೆನೋವು, ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದ ತಿಮ್ಮಕ್ಕ ಅವರನ್ನು ಹಾಸನದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.

ತಿಮ್ಮಕ್ಕ ಅವರು ನೆಟ್ಟು ಬೆಳೆಸಿದ್ದ ಸಾಲು ಮರಗಳ ಬುಡವನ್ನು ರಸ್ತೆ ನಿರ್ಮಾಣಕ್ಕಾಗಿ ಅಗೆದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಕುದೂರು ಮತ್ತು ಹುಲಿಕಲ್ ರಸ್ತೆಯ ಎರಡೂ ಬದಿಗಳಲ್ಲಿ ತಿಮ್ಮಕ್ಕ ನೆಟ್ಟು ಬೆಳೆಸಿದ ಮರಗಳಿದ್ದು, ಇಲ್ಲಿ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಸಿದವರು ಮರಗಳ ಬುಡವನ್ನು ಅಗೆದು ಮಣ್ಣು ತೆಗೆದಿದ್ದಾರೆ. ಇದರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ದೂರು ನೀಡುವುದಾಗಿ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದ್ದರು.

Comments are closed.