ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸದ್ಯ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಡಾಲರ್ಸ್ ಕಾಲೋನಿಯಲ್ಲಿ ಅವರ ನಿವಾಸದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನಿದ್ರೆ ಮಾತ್ರೆ ಸೇವಿಸಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಕೂಡಲೇ ಇದನ್ನು ಗಮನಿಸಿದ ಅವರ ಪತ್ನಿ ಸಮೀಪದ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸಂತೋಷ್ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಎಸ್, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಅವರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.‘ಸಂತೋಷ್ ಶುಕ್ರವಾರ ಬೆಳಿಗ್ಗೆ ನನ್ನ ಜತೆ ತುಂಬಾ ಹೊತ್ತು ವಾಕ್ ಮಾಡಿದ್ದ. ಖುಷಿ ಖುಷಿಯಾಗಿ ಚೆನ್ನಾಗಿ ಇದ್ದಿದ್ದ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂತೋಷ್ ಬಹ ಬೇಸರದಿಂದ ಇದ್ದರು ಎಂದು ಅವರ ಪತ್ನಿ ಜಾಹ್ನವಿ ಹೇಳಿದ್ದಾರೆ. ‘ಕೌಟುಂಬಿಕವಾಗಿ ನಾವು ಬಹಳ ಚೆನ್ನಾಗಿದ್ದೇವೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದನ್ನು ಮನಸಿಗೆ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆಯಿಂದ ಬೇಸರದಲ್ಲಿದ್ದರು. ಸಂಜೆ ಹೊರಗಡೆ ಹೋಗಿ ಏಳು ಗಂಟೆಗೆ ಮನೆಗೆ ಬಂದಿದ್ದರು. ಊಟಕ್ಕೆ ಏನು ಮಾಡುವುದು ಎಂದು ಕೇಳಲು ಹೋದಾಗ ಪ್ರಜ್ಞೆ ತಪ್ಪಿರುವುದು ಕಂಡುಬಂತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದೆವು. ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರ ಹೇಳಿದ್ದಾರೆ’ ಎಂದು ಜಾಹ್ನವಿ ತಿಳಿಸಿದ್ದಾರೆ.
Comments are closed.