ಕರಾವಳಿ

ಲ್ಯಾಂಡ್​ಲೈನ್​ ಬಳಕೆದಾರರ ಗಮನಕ್ಕೆ – ಜನವರಿಯಿಂದ ಹೊಸ ನಿಯಮ ಜಾರಿ: ಇಲ್ಲಿದೆ ಸಮಗ್ರ ಮಾಹಿತಿ

Pinterest LinkedIn Tumblr

ನವದೆಹಲಿ: ನಿಮ್ಮ ಮನೆ, ಕಚೇರಿಯಲ್ಲಿ ಲ್ಯಾಂಡ್​ಲೈನ್​ ಬಳಕೆ ಮಾಡುತ್ತಿದ್ದಿರಾ? ಹಾಗಾದರೆ ಜನವರಿ 1ರಿಂದ ನೀವು ಲ್ಯಾಂಡ್​ಲೈನ್ ಮೂಲಕ ಕರೆ ಮಾಡುವ ಮೊದಲು ಈ ಮಾಹಿತಿಯನ್ನು ತಿಳಿದುಕೊಳ್ಳಲ್ಲೇ ಬೇಕು.

ಹೊಸ ವರ್ಷದಿಂದ ದೇಶದ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡುವ ವಿಧಾನವು ಸಂಪೂರ್ಣವಾಗಿ ಬದಲಾಗುತ್ತದೆ. ಸ್ಮಾರ್ಟ್​ಫೋನ್​ ಬಂದ ಮೇಲೆ ಲ್ಯಾಂಡ್​ಲೈನ್​ ಬಳಕೆ ಕಡಿಮೆಯಾಗಿದ್ದರೂ, ಕಚೇರಿಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಇನ್ನೂ ಲ್ಯಾಂಡ್​ಲೈನ್​ಗಳು ಬಳಕೆಯಲ್ಲಿವೆ. ಇಂಥ ಲ್ಯಾಂಡ್​ಲೈನ್​ಗಳಲ್ಲಿ ಒಂದು ಮಾರ್ಪಾಟನ್ನು ಮಾಡಲಾಗಿದೆ.

ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.

ಹೊಸ ನಿಯಮಗಳ ಪ್ರಕಾರ ಜನವರಿ 1, 2021ರಿಂದ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡಿ ಮಾತನಾಡಲು ಶೂನ್ಯ (Zero) ಅನ್ವಯಿಸಬೇಕಾಗುತ್ತದೆ.

ಟೆಲಿಕಾಮ್​​ ಸೇವೆಯಲ್ಲಿ ಸೂಕ್ತ ನಂಬರಿಂಗ್ ಸ್ಪೇಸ್​ ಸೃಷ್ಟಿಸುವ ಸಲುವಾಗಿ ಇಂಥದ್ದೊಂದು ಪ್ರಕ್ರಿಯೆ ಇರಬೇಕೆಂದು ಕಳೆದ ಮೇನಲ್ಲಿ ಟ್ರಾಯ್(Telecom Regulatory Authority of India)​​​ ಶಿಫಾರಸ್ಸು ಮಾಡಿತ್ತು. ಆ ಪ್ರಸ್ತಾವನೆಯನ್ನ ಟೆಲಿಕಾಂ ಇಲಾಖೆ ಅಂಗೀಕರಿಸಿದೆ. ಈ ಹೊಸ ಡಯಲಿಂಗ್ ವ್ಯವಸ್ಥೆಯನ್ನ ಜಾರಿಗೆ ತರಲು ಮುಂಬರುವ ಜನವರಿ 1ರವರೆಗೆ ಕಾಲಾವಕಾಶ ನೀಡಲಾಗಿದೆ.

ವ್ಯಕ್ತಿಯು ಲ್ಯಾಂಡ್​​ಲೈನ್​ನಲ್ಲಿ ಸೊನ್ನೆ ಒತ್ತದೇ ನೇರವಾಗಿ, ಮೊಬೈಲ್ ನಂಬರ್​ಗೆ ಕರೆ ಮಾಡಿದ್ರೆ, ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್​ ರೆಕಾರ್ಡ್​ ಪ್ಲೇ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಡಯಲಿಂಗ್ ಪ್ಯಾಟ್ರನ್​​​ನಲ್ಲಿನ ಈ ಬದಲಾವಣೆ ಮೂಲಕ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಮೊಬೈಲ್ ಸೇವೆಗಳಿಗೆ 254 ಕೋಟಿಯಷ್ಟು ಹೆಚ್ಚುವರಿ ಸಂಖ್ಯೆಯ ಸಂಪನ್ಮೂಲವನ್ನ ಉತ್ಪಾದಿಸುತ್ತದೆ ಎಂದು ಟ್ರಾಯ್ ಹೇಳಿದೆ.

ಈ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆಯು ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿದ್ದು ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವಾಗ ಡಯಲ್ ವಿಧಾನವನ್ನು ಬದಲಾಯಿಸಲು TRAI ಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೆಚ್ಚಿನ ಸಂಖ್ಯೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಸೇವೆಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಡಯಲಿಂಗ್ ವಿಧಾನದಲ್ಲಿ ಈ ಬದಲಾವಣೆಯೊಂದಿಗೆ ಟೆಲಿಕಾಂ (Telecom) ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯವನ್ನು ಪಡೆಯಲಿವೆ. ಭವಿಷ್ಯದ ಅಗತ್ಯಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಇದರ ನಂತರ ಕಂಪನಿಗಳು ಹೊಸ ಸಂಖ್ಯೆಗಳನ್ನು ನೀಡಲು ಸಹ ಸಾಧ್ಯವಾಗುತ್ತದೆ. ಪ್ರಸ್ತುತ ಈ ಸೌಲಭ್ಯವು ನಿಮ್ಮ ಪ್ರದೇಶದ ಹೊರಗಿನ ಕರೆಗಳಿಗೆ ಲಭ್ಯವಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಕಂಪನಿಗಳಿಗೆ ಜನವರಿ 1ರವರೆಗೆ ಕಾಲಾವಕಾಶ ನೀಡಿದೆ.

Comments are closed.