ಮಂಗಳೂರು : ಕೋವಿಡ್-19, ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ-ಸ್ವನಿಧಿಯ ಮೂಲಕ ವಿಶೇಷ ಕಿರುಸಾಲ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಈ ಯೋಜನೆ ದೊರಕಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.
ಪ್ರದಾನ ಮಂತ್ರಿ ಬೀದಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಬರ್ ನಿಧಿ (ಪಿಎಂ – ಸ್ವನಿಧಿ) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಸದರಿ ಯೋಜನೆಯ ಅನುಸ್ಥಾನದಲ್ಲಿನ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಂತೆ, ಮಾರುಕಟ್ಟೆ, ಬಂದರು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರ ಮಾಡುವ ಪ್ರದೇಶಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ತಂಡದೊಂದಿಗೆ ಲ್ಯಾಪ್ಟಾಪ್ ಮೂಲಕ ಖುದ್ದಾಗಿ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ಪಡೆದಿರದ ವ್ಯಾಪಾರಿಗಳು ಗುರುತಿನ ಚೀಟಿ ಹಾಗೂ ವ್ಯಾಪಾರ ಮಾರಾಟ ಪ್ರಮಾಣಪತ್ರವನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಸಮೀಕ್ಷೆಯಲ್ಲಿ ಗುರುತಿಸಲ್ಪಡದ ಅಥವಾ ಸಮೀಕ್ಷೆ ನಂತರ ಬೀದಿಬದಿ ವ್ಯಾಪಾರ ಪ್ರಾರಂಭಿಸಿರುವ ಫಲಾನುಭವಿಗಳಿಗೆ ಹಾಗೂ ಅಸುಪಾಸಿನ ಊರುಗಳಿಂದ ಬಂದು ನಗರ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವವವರಿಗೆ ಶಿಫಾರಸ್ಸು ಪತ್ರ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಆಯಾ ವಾರ್ಡಿನ ಕಾರ್ಪೋರೇಟ್ಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡಿ, ಅವರ ನೆರವು ಪಡೆದುಕೊಂಡು ಪ್ರತೀ ವಾರ್ಡ್ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯತ್ಗಳಲ್ಲಿ ಅಧಿಕಾರಿಗಳು ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಸೂಚನೆ ನೀಡಿದರು. ಸದ್ರಿ ಸಭೆಯಲ್ಲಿ ಪಿಎಂ – ಸ್ವನಿಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಲಹೆ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ ಹಾಗೂ ಮತ್ತಿತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.