ಕರಾವಳಿ

ಹಣಕಾಸು ನಿರ್ವಹಣೆಯಲ್ಲಿ ತರಬೇತಿ : ಮಂಗಳೂರಿನಲ್ಲಿ ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ಆರಂಭ

Pinterest LinkedIn Tumblr

ಮಂಗಳೂರು : ಮಂಗಳೂರಿನ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ಮೂಲದ ಸಿಂಪ್ಲಸ್ ಲರ್ನಿಂಗ್ ಅಕಾಡೆಮಿ ಸಹಯೋಗದೊಂದಿಗೆ ತನ್ನ ಎಂಬಿ‌ಎ ವಿದ್ಯಾರ್ಥಿಗಳಿಗೆ ‘ಬೇಸಿಕ್ಸ್ ಆಫ್ ಮನಿ ಮ್ಯಾನೇಜ್‌ಮೆಂಟ್’ ವಿಷಯದಲ್ಲಿ ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ಅನ್ನು ಪರಿಚಯಿಸಿದೆ.

ಮಂಗಳೂರಿನ ಪ್ರಖ್ಯಾತ ಹಣಕಾಸು ಸಲಹೆಗಾರ ಮತ್ತು ಕೊಲಾಸೊ & ಅರಾನ್ಹಾ ಸಂಸ್ಥೆಯ ಪಾಲುದಾರ ಜೆರಾರ್ಡ್ ಕೊಲಾಸೊ ಅವರು ಸೋಮವಾರ ನವೆಂಬರ್ ೯ರಂದು ಮಂಗಳೂರಿನ ಬೊಂದೆಲ್‌ನಲ್ಲಿರುವ ಎಂಎಸ್‌ಎನ್‌ಐ‌ಎಂ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಿಂಪ್ಲಸ್ ಫೈನಾನ್ಷಿಯಲ್ ಕನ್ಸಲ್ಟೆನ್ಸಿ ಪ್ರೈ.ಲಿ.ನ ಸ್ಥಾಪಕ ಮತ್ತು ನಿರ್ದೇಶಕ ದೀಪಕ್ ಕೆ. ರಾವ್, ಎಂಎಸ್‌ಎನ್‌ಐ‌ಎಂ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ, ಡಬ್ಲ್ಯು‌ಎನ್‌ಇ‌ಎಸ್ ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಮತ್ತು ಕಾರ್ಯದರ್ಶಿ ದೇವಾನಂದ್ ಪೈ ಉಪಸ್ಥಿತರಿದ್ದರು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಆರ್ಥಿಕ ಗುರಿಗಳನ್ನು ಸಾಧಿಸಲು ಆರ್ಥಿಕ ಯೋಜನೆ ಮಾಡುವುದು ಅತ್ಯಗತ್ಯ ಎಂದು ಮುಖ್ಯ ಅತಿಥಿ ಜೆರಾರ್ಡ್ ಕೊಲಾಸೊ ತಮ್ಮ ದಿಕ್ಸೂಚಿ ಭಾಷಣದಲ್ಲಿ ನುಡಿದರು. “ನೀವು ಯೋಜಿಸಲು ವಿಫಲವಾದರೆ, ನೀವು ವಿಫಲಗೊಳ್ಳಲು ಯೋಜಿಸುತ್ತೀರಿ ಎಂದರ್ಥ” ಎಂದು ಅವರು ಹೇಳಿದರು.

ಉದ್ಯೋಗದ ಬದಲು ಅಭಿವೃದ್ಧಿಶೀಲ ಉದ್ಯಮಶೀಲತೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಮತ್ತು “ನಿಮ್ಮ ಕನಸಿನ ಜೀವನವನ್ನು ನಡೆಸಲು, ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಬೇಗನೆ ಸಾಧಿಸಲು ಪ್ರಯತ್ನಿಸಿ. ನಿಮ್ಮ ಭವಿಷ್ಯವನ್ನು ನೀವೇ ವ್ಯಾಖ್ಯಾನಿಸಬೇಕು, ಬೇರೆ ಯಾರೂ ಅದನ್ನು ನಿಮಗಾಗಿ ಮಾಡಲು ಸಾಧ್ಯವಿಲ್ಲ. ಮೊದಲನೆಯದಾಗಿ, ನಿಮ್ಮ ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿರಿ. ಎರಡನೆಯದಾಗಿ, ನೀವು ಏನೇ ಮಾಡಿದರೂ ನಿಮ್ಮ ಅತ್ಯುತ್ತಮವಾದದನ್ನು ನೀಡಿ. ಮೂರನೆಯದಾಗಿ, ಮತ್ತು ಮುಖ್ಯವಾಗಿ, ಇತರರಿಗೆ ಸಹಾಯ ಮಾಡಿ,” ಎಂದು ಹೇಳಿದರು.

30 ಗಂಟೆಗಳ ಕೋರ್ಸ್‌ನಲ್ಲಿ ಹೂಡಿಕೆ, ಹಣಕಾಸು ಯೋಜನೆ, ವಿಮೆ, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಮತ್ತು ಉದ್ಯಮಶೀಲತೆಯಂತಹ ವೈಯಕ್ತಿಕ ಹಣಕಾಸು ವಿವರಗಳನ್ನು ಒಳಗೊಂಡಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಸಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದು ನವೆಂಬರ್ 29 ರಂದು ಮುಕ್ತಾಯ ಗೊಳ್ಳಲಿದೆ. ಸಂಸ್ಥೆಯ 86 ವಿದ್ಯಾರ್ಥಿಗಳು ಕೋರ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಇದು ಎಂಎಸ್‌ಎನ್‌ಐ‌ಎಂ ವಿದ್ಯಾರ್ಥಿಗಳಿಗೆ ಅವರ ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮೌಲ್ಯವರ್ಧಿತ ಪಠ್ಯೇತರ ಕೋರ್ಸ್‌ಗಳ ಸರಣಿಯ ಭಾಗವಾಗಿದೆ. ಈ ತರಬೇತಿಯು ಅಂತಿಮ ವರ್ಷದ ಎಂಬಿ‌ಎ ವಿದ್ಯಾರ್ಥಿ ಗಳಿಗೆ ವಿವಿಧ ಹಣಕಾಸು ಯೋಜನೆ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಒಂದು ವೇದಿಕೆಯಾಗಿದೆ. ವೃತ್ತಿಪರ ಹಣಕಾಸು ಸಲಹೆಗಾರರಾದ ಸಪ್ನಾ ಶೆಣ, ಯವೊನಿಲ್ ಡಿಸೌಜಾ, ಎಲ್ಸ್ಟನ್ ನೀಲ್ ಮೆನೆಜೆಸ್, ಗೇವಿನ್ ಅಬ್ನರ್ ಪಿಂಟೊ, ಲಾಲ್ ಕೃಷ್ಣೇಶ್, ವಿನೋದ್ ಕುಮಾರ್ ಎನ್ ಮತ್ತು ಉದ್ಯಮಿ ಗೋಪಾಲ ಕೃಷ್ಣ ಬಾಳಿಗಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಸಿಂಪ್ಲಸ್ ಲರ್ನಿಂಗ್ ಅಕಾಡೆಮಿ ಬೆಂಗಳೂರು ಮೂಲದ ವೈಯಕ್ತಿಕ ಹಣಕಾಸು ಸೇವೆಗಳ ಸಂಸ್ಥೆಯಾದ ಸಿಂಪ್ಲಸ್ ಫೈನಾನ್ಷಿಯಲ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್‌ನ ತರಬೇತಿ ವಿಭಾಗವಾಗಿದ್ದು, ದೇಶದ ಸಾಮಾನ್ಯ ಹೂಡಿಕೆದಾರರಿಗೆ ಶಿಕ್ಷಣ, ಜ್ಞಾನೋದಯ ಮತ್ತು ಸಬಲೀಕರಣಕ್ಕಾಗಿ 2006 ರಲ್ಲಿ ಸ್ಥಾಪಿಸಲಾಯಿತು.

ಸಿಂಪ್ಲಸ್ ಫೈನಾನ್ಷಿಯಲ್ ಕನ್ಸಲ್ಟೆನ್ಸಿಯ ವಿಮಾ ಸಲಹೆಗಾರ ಗೇವಿನ್ ಆಬ್ನರ್ ಪಿಂಟೊ ಅವರು ಸ್ವಾಗತಿಸಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಎಂಎಸ್‌ಎನ್‌ಐ‌ಎಂ ಸಹಾಯಕ ಪ್ರಾಧ್ಯಾಪಕಿ ನಂದಿತಾ ಸುನಿಲ್ ವಂದಿಸಿದರು.

Comments are closed.