ಕಲಬುರ್ಗಿ: ಸಚಿವ ಸ್ಥಾನಕ್ಕೆ ಮತ್ತೆ ತಗಾದೆ ತೆಗೆದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಯಾರ ಮನೆ ಮುಂದೆಯೂ ನಿಲ್ಲಲ್ಲ, ಯಡಿಯೂರಪ್ಪ ಅವರೇ ನೀಡಿದ ಭರವಸೆಯಂತೆ ತನಗೆ ಸಚಿವ ಸ್ಥಾನ ನೀಡಲಿ ಎಂದಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖಗೊಂಡ ನಂತರ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ದಾಹ ನನಗಿಲ್ಲ. ಸಚಿವರನ್ನಾಗಿಸಿ, ಎಂಎಲ್ಸಿಯನ್ನಾಗಿಸಿ ಎಂದು ಯಾರ ಮನೆ ಬಳಿಯೂ ಹೋಗಲ್ಲ. ಈ ಮಾಲೀಕಯ್ಯ ಗುತ್ತೇದಾರ ಭಿಕ್ಷೆ ಬೇಡುವ ಜಾಯಮಾನದವನಲ್ಲ ಎಂದಿದ್ದಾರೆ.
ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆಯನ್ನು ಈಡೇರಿಸದೇ ಇರುವುದಕ್ಕೆ ಮಾಲೀಕಯ್ಯ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ, ಸದ್ಯಕ್ಕೆ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುತ್ತೇನೆ. ಆದರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಕಲಬುರ್ಗಿ ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು. ಕಲಬುರ್ಗಿಯಲ್ಲಿ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಮತ್ತಿತರರು ಅರ್ಹ ಶಾಸಕರಿದ್ದಾರೆ. ಇವರ ಪೈಕಿ ಯಾರಿಗಾದರೂ ಸಚಿವ ಸ್ಥಾನ ನೀಡಲಿ ಎಂದಿದ್ದಾರೆ.