ಕರಾವಳಿ

ಕೋಟಿ ಹಣಕ್ಕಾಗಿ ನಡೆಯಿತೇ ಕೊಲೆ?.. ಸುರೇಂದ್ರ ಬಂಟ್ವಾಳ್ ಹತ್ಯೆ ಕಾರಣ ಇನ್ನೂ ನಿಗೂಢ

Pinterest LinkedIn Tumblr

ಮಂಗಳೂರು/ ಬಂಟ್ವಾಳ, ಆಕ್ಟೋಬರ್.30: ರೌಡಿ ಶೀಟರ್, ತುಳು ಚಿತ್ರನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇಬ್ಬರು ಈಗಾಗಲೇ ಆರೋಪಿಗಳು ಪೋಲೀಸ್ ಕಸ್ಟಡಿಯಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿರುವ ಮೂವರು ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದ ತಂಡ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಕರಣ :

ಆಕ್ಟೋಬರ್ 20ರಂದು ಬಂಟ್ವಾಳದ ಬೈಪಾಸ್ ಭಂಡಾರಿಬೆಟ್ಟು ವಸ್ತಿ ರೆಸಿಡೆನ್ಸಿಯಲ್ಲಿ ಸುರೇಂದ್ರ ಬಂಟ್ವಾಳ ಹತ್ಯೆ ನಡೆದಿತ್ತು. ಮರುದಿನ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿತ್ತು.

ಇದೇ ವೇಳೆ ಸುರೇಂದ್ರ ಬಂಟ್ವಾಳ ಅವರ ಕೊಲೆ ನಾನೇ ಮಾಡಿದ್ದು. ಇದು ಉಡುಪಿಯಲ್ಲಿ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿದೆ ಎಂದು ಹೇಳುತ್ತಿರುವ ಆಡಿಯೋ ಒಂದು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿತ್ತು.ಇದು ಸತೀಶ್ ಕುಲಾಲ್ ಎಂಬಾತ ಕಳಿಸಿದ್ದು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ಆತನ ಬಂಧನ ಕೂಡ ನಡೆದಿತ್ತು.

ಆದರೆ ಈ ನಡುವೆ ಸುರೇಂದ್ರ ಬಂಟ್ವಾಳ್ ಬಳಿ ಇದ್ದ ಒಂದು ಕೋಟಿ ರೂಪಾಯಿ ಹಣ ದೋಚುವುದಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸುರೇಂದ್ರನ ತಾಯಿ ರಾಧಾ ಮತ್ತು ಮಂಗಳೂರಿ ನಲ್ಲಿರುವ ಸುರೇಂದ್ರ ಸಹೋದರ ಚಂದ್ರಹಾಸ್ ಈ ಆರೋಪ ಮಾಡಿದ್ದಾರೆ.

ಭಂಡರಿಬೆಟ್ಟು ಫ್ಲ್ಯಾಟ್‌ನಲ್ಲಿ ಸುರೇಂದ್ರನ ಬಳಿ ಒಂದು ಕೋಟಿ ರೂಪಾಯಿ ನಗದು ಮತ್ತು ಅವರ ದೇಹದ ಮೇಲೆ ಸುಮಾರು ಒಂದು ಕಿಲೋಗ್ರಾಂ ಚಿನ್ನದ ಆಭರಣಗಳಿತ್ತು. ಹಾಗಾಗಿ ಅತನನ್ನು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಆರೋಪಿಗಳು ನಗದು ಮತ್ತು ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ನಾವು ಈಗಾಗಲೇ ಪೊಲೀಸ್ ಇಲಾಖೆಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇವೆ ಎಂದವರು ಹೇಳಿದ್ದಾರೆ.

ಹತ್ಯೆ ನಡೆಯುವ ಮೂರು ದಿನಗಳ ಹಿಂದೆ ತನ್ನ ಮಗ ತನ್ನ ಫ್ಲ್ಯಾಟ್‌ನಲ್ಲಿದ್ದ ಹಣದ ಬಗ್ಗೆ ಹೇಳಿದ್ದಾಗಿ ತಾಯಿ ರಾಧಾ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಬೆಳೆದ ಸತೀಶ್ ಕುಲಾಲ್ ಈ ಹಣಕ್ಕಾಗಿ ಇತರರೊಂದಿಗೆ ಸೇರಿ ಈ ಕೊಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಸತೀಶ್ ಕುಲಾಲ್ ಜೊತೆ ಹಲವಾರು ಕಾಣದ ಕೈಗಳು ಕೆಲಸ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ

ಉಳಿದ ಆರೋಪಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆ :

ಪ್ರಮುಖ ಆರೋಪಿಗಳಾದ ಸತೀಶ್ ಕುಲಾಲ್ ಹಾಗೂ ಗಿರಿ ಯಾನೆ ಗಿರೀಶ್ ಕಿನ್ನಿಗೊಳಿ ಬಂಧನ ಬಳಿಕ ಪೊಲೀಶ್ ತನಿಖೆಯ ವೇಳೆ ಮತ್ತೆ ಮೂವರ ಹೆಸರು ಕೇಳಿ ಬಂದಿದ್ದು, ಅದರಂತೆ ವೆಂಕಪ್ಪ ಯಾನೆ ವೆಂಕಟೇಶ್, ಪಬ್ಬು ಯಾನೆ ಪ್ರದೀಪ್ ಹಾಗೂ ಬಂಡಾಡಿ ಶರೀಫ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಒಟ್ಟು ಐದು ಆರೋಪಿಗಳ ಬಂಧನವಾಗಿದ್ದು ಇದೀಗ ಎಲ್ಲಾ ಆರೋಪಿಗಳು ಪೋಲೀಸ್ ಕಸ್ಟಡಿಯಲ್ಲಿದ್ದಾರೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಲಕ್ಷ್ಮೀ ಪ್ರಸಾದ್ ಹಾಗೂ ಬಂಟ್ವಾಳ ಡಿವೈಸ್ಪಿ ವೆಲೆಂಟೈನ್ ಡಿ’ಸೋಜರವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ಕೊಲೆ ಆರೋಪಿಗಳ ತನಿಖೆ ನಡೆಸುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ರಹಸ್ಯ ಇನ್ನು ಬಹಿರಂಗವಾಗಿಲ್ಲ. ಆದರೆ ಬಂಧಿತರು ವಿಚಾರಣೆ ವೇಳೆ ಇನ್ನಷ್ಟು ಆರೋಪಿಗಳ ಬಗ್ಗೆ ಸುಳಿವು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ಮಂದಿ ಶೀಘ್ರವಾಗಿ ಬಂಧನವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭಿಸಿದೆ.

Comments are closed.