ಕರಾವಳಿ

ಅಯುಧ ಪೂಜಾ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ ಕೊರೋನಾ : ಸಡಗರ ಸಂಭ್ರಮದಿಂದ ಹಬ್ಬ ಆಚರಣೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.24: ಕರಾವಳಿಯಾದ್ಯಂತ ಇಂದು ಅಯುಧ ಪೂಜಾ ಸಂಭ್ರಮ. ನವರಾತ್ರಿ ಸಂದರ್ಭ ವಿಜಯದಶಮಿಗೂ ಮೊದಲು ಬರುವ ಆಯುಧ ಪೂಜೆಯನ್ನು ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಭಕ್ತಾಧಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆಯುಧ ಪೂಜೆಯನ್ನು ಸರಳ ರೀತಿಯಲ್ಲಿ ಆಚರಿಸಿದರು.

ಆಯುಧ ಪೂಜೆಯ ಪ್ರಯುಕ್ತ ಶನಿವಾರ ಜಿಲ್ಲಾದ್ಯಂತ ಪ್ಯಾಕ್ಟರಿಗಳು, ಗ್ಯಾರೇಜುಗಳು,ಯಂತ್ರೋಪಕರಣಗಳ ಮಳಿಗೆಗಳು, ವರ್ಕ್ ಶಾಪ್ ಗಳಲ್ಲಿ ಅಯುಧ ಪೂಜೆ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಇಂದು ಮುಂಜಾನೆಯಿಂದಲೇ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ವಾಹನ ಮಾಲಕರು ತಮ್ಮ ಇಷ್ಟದ ದೇವಸ್ಥಾನಗಳಲ್ಲಿ ತಮ್ಮ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

 

ನಗರದ ಶರವು ದೇವಸ್ಥಾನ ಹಾಗೂ ಉರ್ವಾಸ್ಟೋರ್ ಸಮೀಪದ ಕೊಟ್ಟಾರದ ಶ್ರೀ ಗಣಪತಿ ದೇವಸ್ಥಾದಲ್ಲಿ ಇಂದು ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ವಾಹನ ಮಾಲಕರು ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಿದರು.

ನಗರ ಹಾಗೂ ಜಿಲ್ಲಾದ್ಯಂತ ಸಂಚರಿಸುವ ಕೆಲವು ಬಸ್ಸುಗಳು ಹಾಗೂ ಇತರ ಖಾಸಗಿ ವಾಹನಗಳು ಇಂದು ಮುಂಜಾನೆ ತಮ್ಮ ವಾಹನಗಳ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭ ಸಲ್ಲಿಸುವ ಪೂಜೆಯಿಂದ ತಮ್ಮಲ್ಲಿ ಸಂತೋಷ, ಐಶ್ವರ್ಯ, ಯಶಸ್ಸು ಇಮ್ಮಡಿಗೊಳ್ಳುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ನಿಟ್ಟಿನಲ್ಲಿ ಬೆಳಗಿನಿಂದಲೇ ವಾಹನಗಳು ಸರತಿಯಲ್ಲಿದ್ದವು. ಇದರಿಂದ ನಗರದಾದ್ಯಂತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಈ ಬಾರಿ ಎರಡು ದಿನ ಅಯುಧ ಪೂಜೆ ಬಂದಿರುವುದರಿಂದ ರವಿವಾರ ಕೂಡ ಆಯುಧ ಪೂಜೆ ನೆರವೇರಿಸಲು ಅವಕಾಶ ಇದೆ. ಹಾಗಾಗಿ ಜನರು ಯಾವೂದೇ ರೀತಿಯ ಗೊಂದಲಕ್ಕೆ ಒಳಗಾಗದೇ ನಿರಾಳವಾಗಿದ್ದರು.

ಆಯುಧ ಪೂಜೆಗಾಗಿ ಬೂದುಗುಂಬಳಕಾಯಿ, ಹೂವು, ಹಣ್ಣು, ತರಕಾರಿ, ಬಟ್ಟೆ ವ್ಯಾಪಾರ ಕೂಡಾ ಭರಾಟೆಯಿಂದ ನಡೆದಿದೆ. ಹೂವಿನ ಬೆಲೆ ಗಗನಕೇರಿದ್ದರೂ ಗ್ರಾಹಕರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸು ಮೂಲಕ ಖುಷಿಪಟ್ಟರು. ವಾಹನಗಳಿಗೆ ಹೂವು ಮುಡಿದು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

Comments are closed.