ಕರಾವಳಿ

ರೌಡಿ ಶೀಟರ್, ನಟ ಸುರೇಂದ್ರ ಬಂಟ್ವಾಳ ಹತ್ಯೆ ಮಾಡಿದ್ದು ನಾನೇ : ವಿವಾದ ಸೃಷ್ಠಿಸಿದ ಆಡಿಯೋ

Pinterest LinkedIn Tumblr

ಬಂಟ್ವಾಳ, ಅಕ್ಟೋಬರ್, 22: ಸುರೇಂದ್ರ ಬಂಟ್ವಾಳ ಅವರ ಕೊಲೆ ನಾನೇ ಮಾಡಿದ್ದು. ಇದು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿದೆ ಎಂದು ಹೇಳುತ್ತಿರುವ ಆಡಿಯೋ ಒಂದು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ಸತ್ಯಾಸತ್ಯತೆಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇತ್ತೀಚಿಗೆ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ ರೌಡಿ ಶೀಟರ್, ಚಿತ್ರನಟ ಸುರೇಂದ್ರ ಭಂಡಾರಿ ಬಂಟ್ವಾಳ್ ನನ್ನು ಸೆ. 24ರಂದು ಉಡುಪಿ ಹಿರಿಯಡ್ಕದಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರವಾಗಿ ಕೊಲೆ ಮಾಡಲಾಗಿದೆ ಎಂಬ ಆಡಿಯೊ ಒಂದು ಸಾಮಾಜಿಕ ಜಾಲತಾಣ ವಾಟ್ಸ್ ಆಯಪ್ ನಲ್ಲಿ ಹರಿದಾಡುತ್ತಿದೆ.

ಸುರೇಂದ್ರ ಬಂಟ್ವಾಳ್ ಅವರ ಆಪ್ತ ಸ್ನೇಹಿತ ಸತೀಶ್ ಕುಲಾಲ್ ಎಂಬಾತ ಈ ಆಡಿಯೋ ಸಂದೇಶ ರವಾನಿಸಿದ್ದು ಎಂದು ಹೇಳಲಾಗುತ್ತಿದೆ. ಆದರೆ ಇದು ಸತೀಶ್ ಕುಲಾಲ್ ಅವರೇ ಕಳಿಸದ ಅಡಿಯೋ ಅಥವಾ ಬೇರೆಯವರು ಸತೀಶ್ ಕುಲಾಲ್ ಹೆಸರಿನಲ್ಲಿ ಕಳಿಸದ ಅಡಿಯೋ ಎಂಬ ಬಗ್ಗೆ ಇನ್ನು ಖಚಿತಪಟ್ಟಿಲ್ಲ.

”ನಾನು 22 ವರ್ಷಗಳಿಂದ ಸುರೇಂದ್ರ ಜೊತೆ ಒಟ್ಟಿಗೆ ಇದ್ದು ಅವರ ಎಲ್ಲಾ ವ್ಯವಹಾರ ನನಗೆ ಗೊತ್ತಿತ್ತು. ಸುರೇಂದ್ರ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಆ ಪಾಪದ ಹಣವನ್ನು ಕಿಶನ್ ಹೆಗ್ಡೆ ಅವರಂತಹ ಒಳ್ಳೆಯ ವ್ಯಕ್ತಿಗಳ ಕೊಲೆಗೆ ದುರುಪಯೋಗ ಮಾಡುತ್ತಿದ್ದ. ಕಿಶನ್ ಹೆಗ್ಡೆ ಹತ್ಯೆಗೆ ಸುರೇಂದ್ರ ಹಣ ಸಹಾಯ ಮಾಡಿದ್ದ. ಈ ವಿಚಾರ ನನಗೆ ತಿಳಿದಿತ್ತು. ನಾನು ಸುರೇಂದ್ರಗೆ ಹೇಳಿದೆ. ನೀನು ತಪ್ಪು ಮಾಡುತ್ತಿದ್ದಿ, ನಿನಗೆ ಇದೆಲ್ಲಾ ಬೇಡ ಎಂದು. ಅದಕ್ಕೆ ನೀನು ಈ ವಿಚಾರ ಹೊರಗಡೆ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಅನಾಮಧೇಯ ವ್ಯಕ್ತಿಯೊಬ್ಬನಿಗೆ ಸುರೇಂದ್ರ ಕರೆ ಮಾಡಿ ಕಿಶನ್ ಹೆಗ್ಡೆ ಕೊಲೆ ನಡೆಸಿದ ತಂಡದ ನಾಯಕ ಮನೋಜ್ ಕೋಡಿಕೆರೆಯನ್ನು ಜೈಲಿನಲ್ಲಿ ಭೇಟಿ ಮಾಡಿ ಒಂದೂವರೆ ಲಕ್ಷ ರೂ. ಹಣ ಮತ್ತು ಬಟ್ಟೆ ನೀಡಿದ್ದೇನೆ. ಇದಕ್ಕೆ ನಿಮ್ಮ ಸಹಾಯ ಬೇಕು ಎಂದು ಹೇಳಿದ್ದ. ಈ ವೇಳೆ ನನಗೆ ಕೋಪ ಮತ್ತು ಬೇಸರ ವಾಗಿತ್ತು.

ಇನ್ನು ಹೀಗೆ ಮುಂದುವರಿದರೆ ಕೋಡಿಕೆರೆ ಮನೋಜ್ ಮತ್ತು ಸುರೇಂದ್ರ ಬಂಟ್ವಾಳ್ ಸೇರಿ ಇನ್ನೂ ಅನೇಕ ಅಮಾಯಕರ ಕೊಲೆ ನಡೆಸುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಈ ಕೊಲೆ ಮಾಡಿದ್ದೇನೆ. ನಾವು ಈಗ ಕಾರವಾರದಲ್ಲಿ ಇದ್ದೇನೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುತ್ತೇನೆ” ಎಂದು ಆತ ಆಡಿಯೊದಲ್ಲಿ ತಿಳಿಸಿದ್ದಾನೆ.

ರೌಡಿ ಶೀಟರ್, ನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಈ ಆಡಿಯೋವನ್ನು ಕೂಡಾ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಹಂತಕರ ಬಂಧನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.