ಕುಂದಾಪುರ: ಕೊರೊನಾ ಚಿಕಿತ್ಸೆಗೆ ಸರ್ಕಾರಕ್ಕೆ ಬಿಲ್ ನೀಡಿರುವುದಾಗಿ ಕಾಂಗ್ರೆಸ್ಸಿಗರು ದೂರಿದ್ದಾರೆ. ಆದರೆ ಬಿಲ್ ನೀಡಿರುವುದು ನನ್ನ ಕಣ್ಣಿನ ಶಸ್ತ್ರ ಚಿಕಿತ್ಸೆ ವೆಚ್ಚಕ್ಕಾಗಿ. ಪ್ರತಿ ಶಾಸಕರು ತಮ್ಮ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಪಡೆಯುವ ಅವಕಾಶ ಇದೆ. ಶಾಸಕರಾಗಿದ್ದ ಗೋಪಾಲ ಪೂಜಾರಿಯವರಿಗೆ ಇದು ಗೊತ್ತಿಲ್ಲದೆ ಇರುವುದು ವಿಪರ್ಯಾಸವಾಗಿದ್ದು ಅವರ ಎಲ್ಲಾ ದೂರುಗಳಿಗೂ ನನ್ನ ಬಳಿ ದಾಖಲೆ ಇದೆ. ಎಲ್ಲಿ ಬೇಕಾದರೂ ಒದಗಿಸಲು ನಾನು ಸಿದ್ದನಿದ್ದೇನೆ. ನಾನು ಸನ್ಯಾಸಿ, ಮನೆ ಬಿಟ್ಟರೆ ನನಗೆ ಬೇರೆ ಯಾವ ರೆಸ್ಟ್ ಹೌಸ್ಇಲ್ಲ. ಹಣ ಕಾಸಿನ ಸಮಸ್ಯೆಯೂ ಇಲ್ಲ. ಸುಮ್ಮನೆ ಹತಾಷೆಗೊಳಗಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು.

ಮಂಗಳವಾರ ಸಂಜೆ ಚಿತ್ತೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಂಡ್ಸೆಯಲ್ಲಿ ಹೊಲಿಗೆ ಕೇಂದ್ರವನ್ನು ನಡೆಸುತ್ತಿದ್ದ ಸ್ವಾವಲಂಬಿ ಮಹಿಳೆಯರನ್ನು ನಾವೂ ಬೀದಿಗೆ ಹಾಕಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಯವರ ಜೊತೆ ಚರ್ಚಿಸಿ, ಸ್ಥಳಾಂತಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿ ಕೊಟ್ಟಿದ್ದೇವೆ. 29 ಗ್ರಾಮಗಳಿಗೆ ಅವಶ್ಯವಿರುವ ನಾಡ ಕಚೇರಿಯನ್ನು ಜನರಿಗೆ ಅನೂಕೂಲವಿರುವಂತಹ ಜಾಗದಲ್ಲಿ ಮಾಡಲಾಗಿದೆ. ಹೊಸ ನಾಡ ಕಚೇರಿ ಮಂಜೂರಾಗಿದ್ದರೂ, ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣದಿಂದ ತಡೆಯಾಜ್ಞೆ ತಂದು ಜನರಿಗೆ ಅನೂಕೂಲವಾಗುವುದನ್ನು ತಪ್ಪಿಸಲಾಗಿದೆ. ಸ್ವಾವಲಂಬನಾ ಹೊಲಿಗೆ ಕೇಂದ್ರದ ಸ್ಥಳಾಂತರದ ವಿಷಯದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರು ರಾಜಕೀಯ ಮಾಡುತ್ತಿದ್ದಾರೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ದೃಷ್ಟಿಯಲ್ಲಿ ಈ ರಾಜಕೀಯ ನಡೆಯುತ್ತಿದ್ದು, ಈ ಬಾರಿ ವಂಡ್ಸೆಯಲ್ಲಿಯೂ ಬಿಜೆಪಿ ಪಕ್ಷದ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡನ ವಿರುದ್ಧ ವಾಗ್ದಾಳಿ….
ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಕುಂದಾಪುರ ಕ್ಷೇತ್ರದಿಂದ ಬಂದು ಇಲ್ಲಿ ರಾಜಕೀಯ ಮಾಡ್ತಿದ್ದಾರೆ. ವಿಕಾಸ್ ಹೆಗ್ಡೆ ವಿಧಾನಸೌಧ, ವಿಕಾಸಸೌಧ ನಡುವಿನ ಏಜೆಂಟ್ ಎಂದು ತಾಲೂಕು ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಆರೋಪಿಸಿದ್ದಾರೆ. ವಿಕಾಸ ಹೆಸರಿಗೆ ಮಾತ್ರ, ಅವರಿಗೆ ಬುದ್ದಿಯೇ ಬೆಳೆದಿಲ್ಲ..ಅವರು ಮಾಡುವ ಆರೋಪ ಎಲ್ಲವೂ ನಿರಾಧಾರ ಎಂದರು.

ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ನಮ್ಮ ಶಾಸಕರು ಕೊರೋನಾ ಹೆಸರಿನಲ್ಲಿ ಬಿಲ್ ಪಡೆದಿಲ್ಲ.ಯಾವುದೇ ತನಿಖೆಗೂ ಶಾಸಕರು ಸಿದ್ಧರಾಗಿದ್ದಾರೆ. ವಂಡ್ಸೆ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರ ಪ್ರಕರಣ ರಾಜಕೀಯ ಪ್ರೇರಿತ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ ಯಡ್ತರೇ, ಸುರೇಶ್ ಬಟವಾಡಿ ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಮಂಜಯ್ಯ ಶೆಟ್ಟಿ, ಪ್ರಮುಖರಾದ ನಾಗರಾಜ್ ಶೆಟ್ಟಿ ನಾರ್ಕಳಿ, ಪ್ರಶಾಂತ್ ಪೂಜಾರಿ ಇದ್ದರು.
Comments are closed.