ಕರಾವಳಿ

ಸ್ಯಾಂಡಲ್‌ವುಡ್ ಮಾದಕ ವಸ್ತು ಪ್ರಕರಣ : ಪೊಲೀಸ್ ಬಲೆಗೆ ಬಿದ್ದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

Pinterest LinkedIn Tumblr

ಬೆಂಗಳೂರು, ಅಕ್ಟೋಬರ್ 20 : ಸ್ಯಾಂಡಲ್ ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಎನ್‌ಸಿಬಿ ವಿಭಾಗದ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ.

ಕನ್ನಡ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಆಡಂ ಪಾಷಾರನ್ನು ಬೆಂಗಳೂರಿನಲ್ಲಿ ಎನ್‌ಸಿಬಿ ಬಂಧಿಸಿದ್ದು, ಡ್ರಗ್ಸ್ ಪ್ರಕರಣದ ತನಿಖೆ ಕೈಗೊಂಡಿರುವ ಬೆಂಗಳೂರು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.

ಕಳೆದ ಬಾರಿಯ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಆಡಂ ಪಾಷಾರನ್ನು ಮಾದಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಡ್ರಗ್ ಪೆಡ್ಲರ್‌ ಡಿ. ಅನಿಕಾಳನ್ನು ಬಂಧಿಸಿದ್ದರು.

ಅನಿಕಾ ನೀಡಿದ ಮಾಹಿತಿ ಅನ್ವಯ ಹಾಗೂ ಇವರ ನಡುವಿನ ದೂರವಾಣಿ ಕರೆಗಳ ಮಾಹಿತಿ ಅನ್ವಯ ಇದೀಗ ಆಡಂ ಪಾಷಾರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ತಮಿಳುನಾಡು ಮೂಲದ ಅನಿಕಾ ಹೋಟೆಲ್ ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡಿದ್ದಳು. ಬಳಿಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು. ಹೊರಮಾವು, ದೊಡ್ಡಗುಬ್ಬಿ ಪ್ರದೇಶದಲ್ಲಿದ್ದ ಈಕೆಗೆ ಅಲ್ಲಿಯೇ ಡ್ರಗ್ಸ್ ಲೋಕದ ಪರಿಚಯವಾಗಿತ್ತು ಎನ್ನಲಾಗಿದೆ.

ತನ್ನ ಬಾಯ್ ಫ್ರೆಂಡ್ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬರ ಸಹಾಯದಿಂದ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳ ಸಂಪರ್ಕ ಅನಿಕಾಗೆ ಸಿಕಿತ್ತು. ಪಾರ್ಟಿಗಳಿಗೆ ಈಕೆ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಡ್ರಗ್ಸ್ ಪೂರೈಕೆಯಿಂದ ಭಾರಿ ಹಣ ಲಭಿಸುತ್ತಿದ್ದರಿಂದ ಅದನ್ನೇ ಅನಿಕಾ ಮತ್ತು ಆಕೆಯ ಬಾಯ್ ಫ್ರೆಂಡ್ ಉದ್ಯೋಗ ಮಾಡಿಕೊಂಡಿದ್ದರು. ಕಿರುತೆರೆಯಲ್ಲಿಯೂ ಕೆಲವು ಕಾಲ ಕೆಲಸ ಮಾಡಿದ್ದ ಅನಿಕಾ ನಟ ನಟಿಯರ ಪರಿಚಯವನ್ನು ಮಾಡಿಕೊಂಡಿದ್ದಳು.

ಆಗಸ್ಟ್ 21ರಂದು ದೆಹಲಿ ಮತ್ತು ಮುಂಬೈ ಪೊಲೀಸರು ಅನಿಕಾ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದ್ದರು. ಈ ಮಾಹಿತಿಯ ಅನ್ವಯ ಅನಿಕಾ ಬಂಧಿಸಲಾಗಿತ್ತು. ಇದೀಗ ಅನಿಕಾ ನೀಡಿದ ಮಾಹಿತಿಯಂತೆ ಕಳೆದ ಬಾರಿಯ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಆಡಂ ಪಾಷಾರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Comments are closed.