ಕರಾವಳಿ

ದಸರಾ ಹುಲಿ ವೇಷ ಕುಣಿತ ವಿವಾದಕ್ಕೆ ತೆರೆ : ಷರತ್ತುಬದ್ಧ ಅನುಮತಿ – ಮನೆ ಕುಣಿತಕ್ಕೆ ನಿರ್ಬಂಧ

Pinterest LinkedIn Tumblr

ಮಂಗಳೂರು, ಅಕ್ಟೋಬರ್.14: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ದಸರಾ ಹುಲಿ ವೇಷ ಕುಣಿತಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಧಿಕಾರಿಗಳು ಇದೀಗ ಹಲವು ದೇವಸ್ಥಾನಗಳು ಮತ್ತು ಶಾರದೋತ್ಸವ ಸಮಿತಿ ಹಾಗೂ ಶಾಸಕರ ಮನವಿ ಮೇರೆಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚಿಸಿ ಮಂಗಳೂರು ದಸರಾದಲ್ಲಿ ಹುಲಿವೇಷಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.

ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು, ದಸರಾ ಪ್ರಯುಕ್ತ ದೇವಸ್ಥಾನದ ಆವರಣದೊಳಗೆ ಮಾತ್ರ ಶ್ರದ್ಧಾಭಕ್ತಿಯಿಂದ ಗರಿಷ್ಠ 10 ಹುಲಿ ವೇಷಧಾರಿಗಳಿಗೆ ನಿಗದಿತ ಕಾಲಮಿತಿಯೊಳಗೆ ಸಂಪ್ರದಾಯ ಹರಕೆ ಅರ್ಪಿಸಲು ಷರತ್ತುಬದ್ಧ ಅನುಮತಿ ನೀಡಿದ್ದಾರೆ.

ಆದರೆ ಹರಕೆ ಸಲ್ಲಿಸುವಾಗ ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಝರ್ ಬಳಸುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ದೇವಸ್ಥಾನ ಆಡಳಿತ ಮಂಡಳಿಯದ್ದೇ ಜವಾಬ್ದಾರಿಯಾಗಿರುತ್ತದೆ. ಯಾವುದೇ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಮತ್ತು ಅಹಿತಕರ ಘಟನೆ ಸಂಭವಿಸಿದ್ದಲ್ಲಿ ದೇವಳದ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಹುಲಿವೇಷಧಾರಿಗಳು ದೇವಸ್ಥಾನದ ಹೊರಗೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಹುಲಿವೇಷ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಪಟಾಕಿ ಹಾಗೂ ಸುಡುಮದ್ದು ಸಂಪೂರ್ಣವಾಗಿ ನಿಷೇಧಿಸಿರುವುದಾಗಿಯೂ ಸಭೆ ನಿರ್ಧರಿಸಿತು.

ಕೊರೊನಾ ಕಾರಣದಿಂದ ದಸರಾ ಸಂದರ್ಭದಲ್ಲಿ ಹುಲಿ ವೇಷ ಕುಣಿತಕ್ಕೆ ದ.ಕ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ, ವಿವಿಧ ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿಯ ಪ್ರಮುಖರು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

ಇದೇ ವೇಳೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು, ದಸರಾ ಅಚರಣೆಯ ವೇಳೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ, ಸಂಪ್ರದಾಯ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿ ಅವಕಾಶ ನೀಡುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ್ದರು.

ಕರಾವಳಿಯ ಮಣ್ಣಿನ ಸಂಸ್ಕೃತಿ ಸಂಸ್ಕಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದು ಎಂಬ ಕಾರಣದಿಂದ ಸಂಪ್ರದಾಯ ಪ್ರಕಾರವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸರಕಾರದ ಉನ್ನತ ಅಧಿಕಾರಿಗಳ ಜತೆಗೆ ಶಾಸಕ ಕಾಮಾತ್ ಚರ್ಚೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ವರ್ಚುವಲ್‌ (ವೀಡಿಯೊ) ಮೂಲಕ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿರುವ ಜಿಲ್ಲಾಧಿಕಾರಿಗಳು ಮಂಗಳೂರು ದಸರಾದಲ್ಲಿ ಹುಲಿವೇಷಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಧಾರ್ಮಿಕ ಪರಿಷತ್‌ನ ಆರನೇ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಕೆ.ಸೂರ್ಯ ಕಷೆಕೋಡಿ, ಸೂರ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಅವರು ವರ್ಚುವಲ್ (ವೀಡಿಯೊ) ಮೂಲಕ ಸಭೆಯಲ್ಲಿ ಹಾಜರಾಗಿದ್ದರು.

Comments are closed.