ಮಂಗಳೂರು,ಆಕ್ಟೋಬರ್.06: ದ.ಕ. ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಗೋಕಳ್ಳತನ ಅಕ್ರಮ ಗೊಸಾಗಾಟ ಮುಂತಾದ ಗೋ ಮಾಫಿಯಾ ದಂಧೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ರಚನೆ ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದು ವಿಹಿಂಪ, ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿ ಕಸಾಯಿಖನೆಯನ್ನು ಕೇಂದ್ರೀಕರಿಸಿ ಗೋವಧೆಗಾಗಿ ಅಕ್ರಮ ಗೋಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದೆ. ಕುದ್ರೋಳಿ ಕಸಾಯಿಖಾನೆ ಹಾಗೂ ಜಿಲ್ಲೆಯಾದ್ಯಂತ ಇತರೆಡೆ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ನಡೆಯುತ್ತಲೇ ಇದೆ.
ಹಲವಾರು ವರ್ಷಗಳಿಂದ ಹಲವು ಪ್ರಕರಣಗಳು ನಡೆದು ಕರ್ಫ಼್ಯೂ ಹೇರುವ ಹಂತಕ್ಕೂ ಹೋಗಿದೆ. ಆದಾರೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಗೋಕಳ್ಳತನ ಅಕ್ರಮ ಗೊಸಾಗಾಟ ನಡೆಯುತ್ತಿದೆ.
ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಮಂಗಳೂರು ನಗರದ ಕೊಣಾಜೆ, ಉಳ್ಳಾಲ, ಕಂಕನಾಡಿ, ಕಾವೂರು, ಮೂದಬಿದ್ರೆ, ಸುರತ್ಕಲ್, ಬಜಪೆ, ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಪುತ್ತೂರು ತಾಲೂಕಿನ ಸುಳ್ಯ, ಬೆಳ್ತಂಗಡಿ, ವಿಟ್ಲ, ಸುಬ್ರಹ್ಮಣ್ಯ, ಸಂಪ್ಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಅಕ್ರಮ ಗೋ ಸಾಗಾಟಕ್ಕೆ ಇನ್ನೋವ, ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್‌ನಂತಹ ಬೆಳೆಬಾಳುವ ವಾಹನಗಳನ್ನು ಉಪಯೋಗಿಸುತ್ತಿದ್ದಾರೆ.
ಇದೊಂದು ಬೃಹತ್ ಗೋ ಮಾಫ಼ಿಯವಾಗಿದ್ದು ಇದರ ಹಿಂದೆ ದೊಡ್ದ ದಂಧೆಯು ರಾಜಾರೋಷವಾಗಿ ನಡೆಯುತ್ತಿದೆ. ಇದರ ಹಿಂದೆ ಇರುವ ಕಾಣದ ವ್ಯಕ್ತಿಗಳನ್ನು ಪತ್ತೆಹಚ್ಚಲು ಅಲ್ಲದೆ ಈ ಗೋ ಮಾಫಿಯಾದ ದಂಧೆಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ರಚನೆ ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತಿರುವುದಾಗಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.
ಗೋವುಗಳನ್ನು ರಸ್ತೆಗೆ ಎಸೆದು ಹಿಂಸೆ : ಕಠಿಣ ಕಾನೂನು ಕ್ರಮ ಕೈಗೊಳ್ಳಲ್ಲು ಆಗ್ರಹ
ಆಕ್ಟೋಬರ್ 4ರಂದು ಬೆಳಿಗ್ಗೆ ನಡೆದ ಘಟನೆಯು ಹಿಂಸಾತ್ಮಕ ಅಕ್ರಮ ಗೋಸಾಗಾಟಕ್ಕೆ ಸಾಕ್ಷಿಯಾಗಿದು ಈ ಘಟನೆಯಲ್ಲಿ ಕಾಪಿಕಾಡ್, ಕುಂಟಿಕಾನ, ಕೆನರಾ ಹೈಸ್ಕೂಲ್, ಉರ್ವ ಹಾಗೂ ಮಣ್ಣಗುಡ್ಡೆ ಗುರ್ಜಿ ಸರ್ಕಲ್ ಬಲಿ ಗೋಸಾಗಾಟದ ವಾಹನದಿಂದ ಗೋವುಗಳನ್ನು ರಸ್ತೆಗೆ ಉದ್ದೇಶಪೂರ್ವಕವಾಗಿ ಬಿಸಾಡಿ ವಿಕೃತಿ ಮೆರೆದಿದ್ದಾರೆ.
ಈ ರೀತಿ ಅಮಾನುಷವಾಗಿ ನಡೆದ ಕೃತ್ಯದಿಂದಾಗಿ ಹಿಂದುಗಳ ಭಾವನೆಗೆ ನೋವುಂಟಾಗಿದ್ದು ಈ ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಗೋಸಾಗಾಟದ ವಾಹನವನ್ನು ಮುಟ್ಟುಗೋಳು ಹಾಕಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದ್ದೇವೆ ಎಂದು ಶರಣ್ ಪಂಪುವೆಲ್ ತಿಳಿಸಿದ್ದಾರೆ.