ಕರ್ನಾಟಕ

ಹೆಣ್ಣುಮಕ್ಕಳ ತಂಟೆಗೆ‌ ಬಂದ್ರೆ ಹುಷಾರ್: ಕೊಡಗಿನಲ್ಲಿ ಕರಾಮತ್ತು ತೋರಿಸಲಿದೆ ‘ಕಾವೇರಿ ಪಡೆ’..!

Pinterest LinkedIn Tumblr

ಕೊಡಗು: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಹೊಸದಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಕಾವೇರಿ ಪಡೆಯನ್ನು ರಚಿಸಿದೆ. ಒಟ್ಟು 18 ಸಿಬ್ಬಂದಿಗಳನ್ನು ಒಳಗೊಂಡಿರುವ ನೂತನ ಕಾವೇರಿ ಪಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಈ ಮಹಿಳಾ ಪೊಲೀಸ್‍ ತಂಡದ ಸದಸ್ಯರಿಗೆ ಪ್ರತ್ಯೇಕವಾದ ಸಮವಸ್ತ್ರವನ್ನು ಒದಗಿಸಲಾಗಿದೆ ಹಾಗೂ ಕಾವೇರಿ ಪಡೆಯ ಸಿಬ್ಬಂದಿಗಳು ಜಿಲ್ಲೆಯ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಗಸ್ತು ತಿರುಗಲು ಪ್ರತ್ಯೇಕವಾದ ಒಂದು ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪಡೆಯು ಪ್ರತಿ ದಿನ ಜಿಲ್ಲೆಯ ವಿವಿಧ ಪಟ್ಟಣಗಳ ಶಾಲಾ ಕಾಲೇಜು, ಬಸ್‍ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಓಡಾಡುವ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಸೂಕ್ತ ನಿಗಾ ವಹಿಸುತ್ತಾರೆ. ಕಾವೇರಿ ಪಡೆಯನ್ನು ಎರಡು ತಂಡಗಳಾಗಿ ವಿಭಾಗಿಸಲಾಗಿದ್ದು ಸರದಿಯಂತೆ ಕರ್ತವ್ಯ ನಿರ್ವಹಿಸುತ್ತಾರೆ. ಕಾವೇರಿ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ವಿವಿಧ ಕಾನೂನುಗಳ ಬಗ್ಗೆ ತಿಳುವಳಿಕೆ, ಪೊಲೀಸ್‍ ಮ್ಯಾನುವಲ್, ಜನಸ್ನೇಹಿ ಪೊಲೀಸ್, ಲಿಂಗಸಂವೇದನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಬಗೆಗಿನ ಕಾನೂನಿನ ಬಗ್ಗೆ ತರಬೇತಿ ನೀಡಿ ತಿಳುವಳಿಕೆ ಮೂಡಿಸಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲು ಹಾಗೂ ಅವರ ರಕ್ಷಣೆಯ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗಿದೆ.

ಇದು ಮಹಿಳೆಯರಿಂದ ಮಹಿಳಯರಿಗಾಗಿ ಮಹಿಳೆಯರ ರಕ್ಷಣೆಗೋಸ್ಕರವೇ ರೂಪಿಸಲ್ಪಟ್ಟ ಒಂದು ವಿಶೇಷ ಪಡೆಯಾಗಿದೆ. ಜಿಲ್ಲೆಯಲ್ಲಿನ ಯಾವುದೇ ಮಹಿಳೆಯರು, ಶಾಲಾ ಕಾಲೇಜಿನ ಹೆಣ್ಣು ಮಕ್ಕಳು ತಮಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತೊಂದರೆ/ಉಪದ್ರವ ಉಂಟಾದಲ್ಲಿ ನೇರವಾಗಿ ಕಾವೇರಿ ಪಡೆಯ ಅಧಿಕಾರಿಗಳಿಗೆ ಅಥವಾ ಪೊಲೀಸ್‍ ಕಂಟ್ರೋಲ್‍ ರೂಂ ಸಂಖ್ಯೆ 100 ಅಥವಾ ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ‌ ಎಂದು‌ ಎಸ್ಪಿ ತಿಳಿಸಿದ್ದಾರೆ.

Comments are closed.