
ಮಂಗಳೂರು : ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಶಾಲಾಭಿವೃದ್ಧಿ ಸಮಿತಿಯಿಂದ ಗುರುವಾರ ಶಾಲಾ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ, ಈ ಶಾಲೆಗೆ ಇನ್ನಷ್ಟು ಅನುದಾನ ನೀಡಿ ಮಾದರಿ, ಸುಸಜ್ಜಿತ ಶಾಲೆಯನ್ನಾಗಿಸುವ ಕನಸು ಇದೆ. ಸರ್ಕಾರದಿಂದ ಬರಬೇಕಿರುವ ಸುಮಾರು 40ಕೋಟಿ ಅನುದಾನ ಬಿಡುಗಡೆಯಾದ ತಕ್ಷಣ ಶಾಲೆಗೂ ಅನುದಾನ ನೀಡಲಾಗುವುದು ಎಂದು ಹೇಳಿದರು.
ಶಿಕ್ಷಣದಿಂದ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಪ್ರತಿಯೊಂದು ಮನೆಯಿಂದಲೂ ವೈದ್ಯ, ಇಂಜಿನಿಯರ್, ನ್ಯಾಯವಾದಿಯಂತಹ ಉನ್ನತ ಶಿಕ್ಷಣ ಪಡೆದವರು ಹೊರಬರಬೇಕು, ಪ್ರತಿಯೊಂದು ಮನೆಯೂ ಸುಶಿಕ್ಷಿತವಾಗಬೇಕು ಎನ್ನುವ ಕನಸು ಹೆತ್ತವರದ್ದಾಗಬೇಕು ಎಂದು ಹೇಳಿದರು.
ಕೋಟೆಪುರ ಜುಮಾ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಅಬ್ಬಾಸ್, ಉಪಾಧ್ಯಕ್ಷ ಅಬೂಬಕ್ಕರ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಸದಸ್ಯ ಅಬ್ದುಲ್ ಹಮೀದ್, ಉದ್ಯಮಿ ಯು.ಹಸೈನಾರ್, ಅರೆಬಿಕ್ ಟ್ರಸ್ಟ್ ಜತೆಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಪ್ರಮುಖರಾದ ಮುಹಮ್ಮದ್ ಮೂಸ, ಸೋಲಾರ್ ಹನೀಫ್ ಕೋಡಿ, ಎ.ಆರ್.ನಝೀರ್, ಯು.ಕೆ.ಯೂಸುಫ್ ಉಳ್ಳಾಲ್, ಸದಕತ್ತುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಎ.ಕೆ.ಮೊಯಿದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ ಅಭಿನಂದನಾ ಭಾಷಣ ಮಾಡಿದರು. ಸಹಶಿಕ್ಷಕ ಮುಹಮ್ಮದ್ ಫಾಝಿಲ್ ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
Comments are closed.