ಕರಾವಳಿ

ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ : ತ್ರಿಭಾಷಾ ರಂಗ ನಾಟಕಗಳು ಕೃತಿ ಬಿಡುಗಡೆಗೊಳಿಸಿ ಎಮ್‌ಎಲ್‌ಸಿ ನಾಯಕ್

Pinterest LinkedIn Tumblr

ಮಂಗಳೂರು :’ ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಹೇಳಿದರು. ಅವರು ಇತ್ತೀಚಿಗೆ ಮಣ್ಣಗುಡ್ಡ ರೋಟರಿ ಭವನದಲ್ಲಿ ಕಾಸರಗೋಡು ಚಿನ್ನಾ ಅವರು ಅನುವಾದಿಸಿದ ತ್ರಿಭಾಷಾ ರಂಗನಾಟಕಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಚಿನ್ನಾರವರನ್ನು ನಾನು ಬಾಲ್ಯದಿಂದಲೇ ಗಮನಿಸುತ್ತಾ ಬಂದವನು. ಕಾಸರಗೋಡಿನ ಗಡಿಪ್ರದೇಶದಲ್ಲೆ ಇದ್ದುಕೊಂಡು ಕರ್ನಾಟಕ ರಾಜ್ಯದಾದ್ಯಂತ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿ, ರಂಗಭೂಮಿ, ಸಿನೆಮ, ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಅವರು ಅಳವಡಿಸಿಕೊಂಡಿರುವ ಶಿಸ್ತು ಮತ್ತು ಸತತ ಪರಿಶ್ರಮ ಕಾರಣ. ಕಾಸರಗೋಡು ಚಿನ್ನಾ ಅವರು ಚತುರ್ಭಾಷಾ ಪ್ರವೀಣರಾಗಿದ್ದು, ಸಾಂಸ್ಕ್ರತಿಕ, ಸಾಹಿತ್ಯಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಅವರ ಈ ತ್ರಿಭಾಷಾ ಅನುವಾದಿತ ಕೃತಿ ಸಾಹಿತ್ಯ ಕ್ಷೇತ್ರದ ಒಂದು ದಾಖಲೆಯೇ ಸರಿ ಎಂದು ಪ್ರತಾಪಸಿಂಹ ನಾಯಕ್ ಅಭಿಪ್ರಾಯ ಪಟ್ಟರು.

ಚಿನ್ನಾ ಅವರಲ್ಲಿ ವಿಭಿನ್ನ ದ್ರಷ್ಟಿಯಲ್ಲಿ ಕೆಲಸ ಮಾಡುವ ವಿಶೇಷ ಶಕ್ತಿಯಿದೆ ಎಂದು ಶುಭಾಶಂಸನೆ ಮಾಡಿ ದಯಾನಂದ ಕತ್ತಲ್ ಸಾರ್ ನುಡಿದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ ಚಿನ್ನಾ ಅವರ ಕ್ರಿಯಾಶೀಲ ಗುಣಗಳನ್ನು ಶ್ಲಾಘಿಸಿ, ‘ಅವರೋರ್ವ ದಣಿವರಿಯದ ಸಾಧಕ’ ಎಂದರು.

ಆರಂಭದಲ್ಲಿ ಖ್ಯಾತ ಗಾಯಕ ರವೀಂದ್ರ ಪ್ರಭು ಪ್ರಾರ್ಥನೆಗೈದರು. ರೋಟರಿ ಕ್ಲಬ್ ಅಧ್ಯಕ್ಷ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ರಂಗ ಸಂಗಾತಿಯ ಶಶಿರಾಜ್ ಕಾವೂರು ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಕಿರಣದ ಅಧ್ಯಕ್ಷ ವಿಠಲ ಕುಡ್ವ ವಂದಿಸಿದರು. ಮೈಮ್ ರಾಮದಾಸ್ ನಿರೂಪಿಸಿದರು.
ಮಂಗಳೂರು ರೋಟರಿ ಕ್ಲಬ್ (ಉತ್ತರ ), ರಂಗ ಕಿರಣ ಮಂಗಳೂರು, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ, ಮಂಗಳೂರು ಹಾಗೂ ಬಿಂಬ ಮಂಗಳೂರು ಬಳಗ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕನ್ನಡ, ತುಳು, ಕೊಂಕಣಿಗೆ ಅನುವಾದಿತ ರಂಗ ನಾಟಕಗಳ ಅನುವಾದಕ ರಂಗ ಕರ್ಮಿ ಕಾಸರಗೋಡು ಚಿನ್ನಾ ಅವರನ್ನು ಅವರ ಉಡುಪಿ, ಮಂಗಳೂರಿನ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃತಿಕಾರ ಚಿನ್ನಾರವರು ‘ಗೆಳೆಯರ ಮೆಚ್ಚುಗೆಯ ನುಡಿ ಮತ್ತಷ್ಟು ಸಾಧನೆಗಳನ್ನು ಮಾಡಲು ಸಹಕಾರಿಯಾಗುತ್ತದೆ. ಈ ಕೃತಿಯನ್ನು ಕರ್ನಾಟಕದ ಏಳು ಪ್ರದೇಶದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.

Comments are closed.