
ನವದೆಹಲಿ : ಭಾರತ ಚೀನಾ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣಿಸ್ತಿಲ್ಲ. ಪೂರ್ವ ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿರುವ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಪ್ಪಿಸುವ ಉದ್ದೇಶದಿಂದ ಶನಿವಾರ ಭಾರತ-ಚೀನಾ ಸೇನೆಗಳ ಮಧ್ಯೆ ಮಾತುಕತೆ ನಡೆದಿದ್ದು, ಉಭಯ ಸೇನೆಗಳೂ ಮುಖಾಮುಖಿ ಸ್ಥಿತಿಯಲ್ಲಿರುವ ಪ್ರದೇಶದಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು ಎಂದು ವರದಿಯಾಗಿದೆ.
ಇನ್ನು ಭಾರತೀಯ ಯೋಧರು ಪೂರ್ವ ಲಡಾಖ್‌ನ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಚೀನಾ ಯೋಧರು ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ. ಪ್ಯಾಂಗಾಂಗ್ ಸರೋವರ ಪ್ರದೇಶಗಳ ವಶ ಪ್ರಯತ್ನ ವಿಫಲಗೊಂಡ ಬೆನ್ನಲ್ಲೇ ಅದರ ಸಮೀಪದಲ್ಲೇ ಇರುವ ಸ್ಪಾಂಗ್ಗೂರ್ ಕಣಿವೆ ಪ್ರದೇಶದ ಬಳಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ. ಅದ್ರಂತೆ, ಪ್ಯಾಂಗಾಂಗ್ ಸರೋವರದ ದಕ್ಷಿಣಕ್ಕಿರುವ ಪ್ರದೇಶದಲ್ಲಿ ಚೀನಾ ಸಾವಿರಾರು ಯೋಧರು, ಟ್ಯಾಂಕರ್‌ಗಳು, ಹೌವಿಟ್ಜರ್ ಗನ್‌ಗಳು ಮತ್ತು ಚೀನಾ ಯೋಧರ ಜೊತೆಗೆ ಸ್ಥಳೀಯ ಬಾಕ್ಸರ್‌ಗಳು, ಕ್ಲಬ್‌ಫೈಟರ್‌ಗಳನ್ನ ನಿಯೋಜಿಸಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಇಲ್ಲಿಗೆ ಚೀನಾ ತನ್ನ ವಿಶೇಷ ಪಡೆಯೊಂದನ್ನು ನಿಯೋಜಿಸಿದೆ. ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಮಾತ್ರ ನಿಯೋಜಿಸುವ ಈ ಪಡೆಯಲ್ಲಿ ಚೀನಾ ಸೇನೆಯ ಮೀಸಲು ವಿಭಾಗಕ್ಕೆ ಸೇರಿದ ಸ್ಥಳೀಯರು ಇರುತ್ತಾರೆ.
ಇವೆಲ್ಲಾ ಭಾರತೀಯ ಸೇನೆ ನಿಯೋಜನೆ ಸ್ಥಳದ ಫೈರಿಂಗ್ ರೇಂಜ್‌ನಲ್ಲೇ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ತಂತ್ರಕ್ಕೆ ಪ್ರತಿತಂತ್ರ ಎನ್ನುವಂತೆ ಈ ಸುಳಿವು ಸಿಕ್ಕ ಬೆನ್ನಲ್ಲೇ ಭಾರತ ಕೂಡಾ ಚೀನಾಕ್ಕೆ ಸಮನಾದ ಪ್ರಮಾಣದಲ್ಲಿ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನ ನಿಯೋಜಿಸಿದೆ.
ಪಾಂಗ್ಯೋಂಗ್ ತ್ಸೊ- ಚೊಷುಲ್ ಪ್ರದೇಶದಲ್ಲಿ ಚೀನಾ ಯೋಧರು, ಟ್ಯಾಂಕ್‌ಗಳು ಹಾಗೂ ತೋಪುಗಳನ್ನು ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಯೋಧರ ಸಂಖ್ಯೆಯನ್ನು ಹೆಚ್ಚಿಸಿದ್ದು ಜೊತೆಗೆ ನಿಯಂತ್ರಣ ರೇಖೆಯ ಪಶ್ಚಿಮ ವಲಯ (ಲಡಾಖ್), ಮಧ್ಯ ವಲಯ(ಉತ್ತರಾಖಂಡ, ಹಿಮಾಚಲ ಪ್ರದೇಶ) ಮತ್ತು ಪೂರ್ವ ವಲಯ(ಸಿಕ್ಕಿಂ, ಅರುಣಾಚಲ ಪ್ರದೇಶ)ದಲ್ಲಿ ಶಸ್ತ್ರಸಜ್ಜಿತ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ ಉಭಯ ಸೇನೆಗಳೂ ಮುಖಾಮುಖಿ ಸ್ಥಿತಿಯಲ್ಲಿರುವ ಪ್ರದೇಶದಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಮುಂದಿನ ಕೆಲ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮಧ್ಯೆ 6ನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
Comments are closed.