ಕರ್ನಾಟಕ

ಎಲ್ಲಾ ದೇವಸ್ಥಾನಗಳಿಗೆ ಸಿಸಿ ಟಿವಿ, ಗನ್ ಮ್ಯಾನ್, ಸೆಕ್ಯೂರಿಟಿ ಗಾರ್ಡ್ ನಿಯೋಜನೆ: ಮಂಡ್ಯದಲ್ಲಿ ಸಚಿವ ಕೋಟ

Pinterest LinkedIn Tumblr

ಮಂಡ್ಯ: ಅರ್ಕೇಶ್ವರ ದೇವಸ್ಥಾನದ ಅರ್ಚಕರ ಹತ್ಯೆಯ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮೃತ ಅರ್ಚಕರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊಲೆಗಡುಕರನ್ನು ಶೀಘ್ರ ಪತ್ತೆ ಕಾನೂನು ಕ್ರಮ ಜರುಗಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರ ಘೋಷಿಸಿದ್ದು, ಅದರಂತೆ ತಲಾ ಐದು ಲಕ್ಷ ರೂ., ಅಂತ್ಯ ಸಂಸ್ಕಾರಕ್ಕೆ 10 ಸಾವಿರ ರೂ. ಹಾಗೂ ಕೇಂದ್ರದ 20 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ. ಅಲ್ಲದೆ, ಪ್ರತೀ ತಿಂಗಳು ಮೃತ ಕುಟುಂಬಗಳಿಗೆ ವಿಧವಾ ವೇತನದ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಕಳೆದ ಎಂಟು ತಿಂಗಳಿನಿಂದ ಹುಂಡಿಯ ಹಣ ಎಣಿಕೆ ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿಯೇ ಕಳ್ಳತನ ನಡೆದಿರಬಹುದು. ಅಲ್ಲದೆ, ಘಟನೆ ನಡೆಯುವ ರಾತ್ರಿ ಪೊಲೀಸರು ಬೀಟ್ ಬಂದಿದ್ದಾರೆ. ಆ ನಂತರ ಕಳ್ಳತನ ನಡೆದಿರಬಹುದು ಎನ್ನಲಾಗುತ್ತಿದೆ. ಎಲ್ಲ ರೀತಿಯಿಂದಲೂ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದ ಎಲ್ಲ 34 ಸಾವಿರ ಮುಜರಾಯಿ ಇಲಾಖೆಗಳ ದೇವಾಲಯಗಳ ಸುರಕ್ಷತೆ ಕ್ರಮ ವಹಿಸಲಾಗುವುದು. ಎಲ್ಲ ದೇವಸ್ಥಾನಗಳಲ್ಲಿ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮೆರಾ, ಗನ್‌ಮ್ಯಾನ್‌ಗಳನ್ನು ನಿಯೋಜಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Comments are closed.