ಕರಾವಳಿ

ಸೆಪ್ಟಂಬರ್.10 : ಶ್ರೀ ಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ – ಶ್ರೀ ಕೃಷ್ಣವೇಷ ಸ್ಪರ್ಧೆ

Pinterest LinkedIn Tumblr

ಮಂಗಳೂರು, ಆಗಸ್ಟ್. 13: ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯ ಸೆಪ್ಟೆಂಬರ್ 10, ಗುರುವಾರ ವರ್ಷಂಪ್ರತಿಯಂತೆ 36ನೇ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಮರ್ಧೆ ಆಯೋಜಿಸಲಾಗಿದೆ.

ಕೊರೋನಾ ಮಹಾಮಾರಿಯ ಈ ಕಾಲಘಟ್ಟದಲ್ಲಿ ಮಕ್ಕಳ ಆರೋಗ್ಯ ಮತ್ತು ನಮ್ಮೆಲ್ಲರ ಆರೋಗ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಸರಕಾರದ ವೈದ್ಯಕೀಯ ವಿಭಾಗದ ನಿರ್ದೇಶನಕ್ಕನುಗುಣವಾಗಿ ಮತ್ತು ಘನಸರಕಾರದ, ಜಿಲ್ಲಾಡಳಿತದ ಮಾರ್ಗಸೂಚಿ ಅನುಶಾಸನಗಳನ್ನು ಪಾಲಿಸಿಕೊಂಡು 36ನೇ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ನಡೆಸಲಾಗುವುದು.

(ಕಡತ ಚಿತ್ರ)

ಈ ದಿಸೆಯಲ್ಲಿ ಕಳೆದ 35 ವರ್ಷಗಳಿಂದ ಭಾಗವಹಿಸಿದ ಕೃಷ್ಣ ವೇಷಧಾರಿಗಳು, ತೀರ್ಪುಗಾರ ಬಂಧುಗಳು, ವಿಶೇಷವಾಗಿ ಮಹಿಳೆಯರು, ಪತ್ರಕರ್ತರು, ದೃಶ್ಯಮಾಧ್ಯಮದವರು, ವಿದ್ಯುನ್ಮಾನ ವಾಹಿನಿಯವರು, ಪ್ರಸಾದನ ಕಲಾವಿದರು, ಸ್ವಯಂಸೇವಕರಾಗಿ ದುಡಿದ ಬಂಧುಗಳು ಎಲ್ಲರನ್ನೊಳಗೊಂಡಂತೆ ಈ ಬಾರಿಯ ಉತ್ಸವವನ್ನು ಹೇಗೆ ನಡೆಸಬಹುದೆಂಬ ಅಭಿಪ್ರಾಯವನ್ನು ಅಪೇಕ್ಷಿಸಲಾಗಿದೆ.

ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಳೆದ ವರ್ಷ ಈ ಅದ್ವಿತೀಯವಾದ ರಾಷ್ಟ್ರೀಯ ಮಕ್ಕಳ ಉತ್ಸವವು ಏಕಕಾಲದಲ್ಲಿ 12 ವೇದಿಕೆಗಳಲ್ಲಿ 34 ವಿಭಾಗಗಳಲ್ಲಿ ನಡೆದಿದ್ದು 3500ಕ್ಕೂ ಮಿಕ್ಕಿ ಮಕ್ಕಳು ಭಾಗವಹಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು, ಸುಮಾರು 300ಕ್ಕೂ ಮಿಕ್ಕಿ ತೀರ್ಪುಗಾರರು 350ಕ್ಕೂ ಮಿಕ್ಕಿ ಸ್ವಯಂಸೇವಕ ಬಂಧುಗಳು ನೂರಾರು ಛಾಯಾಗ್ರಾಹಕರು, ವೀಡಿಯೋಗ್ರಾಫರ್, ಪ್ರಸಾದನ ಕಲಾವಿದರು ಭಾಗವಹಿಸಿದ್ದನ್ನು ಸ್ಮರಿಸಬಹುದು.

ಬಾಡಿಗೆ ಅಥವಾ ಇನ್ನೊಬ್ಬರು ಉಪಯೋಗಿಸಿದ ಬಟ್ಟೆಬರೆ ಹಾಗೂ ಪ್ರಸಾಧನ ಸಾಧನಗಳನ್ನು ಬಳಸದೆ ಸ್ವತಃ ತಮ್ಮದೇ ಮನೆಗಳಲ್ಲಿ ತಯಾರಿಸಲ್ಪಟ್ಟ ಪ್ರಸಾಧನ ಸಲಕರಣೆಗಳನ್ನು ಉಪಯೋಗಿಸಿ ಮನೆಯಲ್ಲೇ ಮಕ್ಕಳನ್ನು ಅಲಂಕಾರಗೊಳಿಸಿ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಚ್ಚು ಸೂಕ್ತ ಎನ್ನುವುದು ಒಂದು ಅಭಿಪ್ರಾಯ.

ಸಾಮಾಜಿಕ ಅಂತರನ್ನು ಕಾಪಾಡುವ ಮೂಲಕ ಸ್ಪರ್ಧೆಯ ಆಯೋಜನೆ, ವಿದ್ಯುನ್ಮಾನ ಮಾಧ್ಯಮಗಳ ಬಳಕೆ, ದೃಶ್ಯ ಮಾಧ್ಯಮಗಳ ಮೂಲಕ ನೇರಪ್ರಸಾರ, ಪತ್ರಿಕೆಯ ಮೂಲಕ ಪ್ರಸರಣ, ಇದನ್ನೆಲ್ಲಾ ದೃಷ್ಠಿಯಲ್ಲಿರಿಸಿ ಕೊಂಡು ಜಗತ್ತಿನ ಈ ಸಂಕಷ್ಟ ಕಾಲದಲ್ಲಿ ಶ್ರೀ ಕೃಷ್ಣನ ವೈಭವವನ್ನು ಪ್ರಚುರಪಡಿಸುವರೇ ತನ್ಮೂಲಕ ಭಾರತೀಯ ಜೀವನ ಸಂಸ್ಕೃತಿಯ ಪುರಾಣದ ವಿಚಾರವನ್ನು ನಮ್ಮ ಮಕ್ಕಳಲ್ಲಿ ಜೀವನೋತ್ಸವ ತುಂಬುವರೇ, ಕೊರೋನಾದ ಕಾಲದಲ್ಲಿ ಮಕ್ಕಳಲ್ಲಿ ಜಡತ್ವ ಆವರಿಸಿಕೊಂಡ ಈ ಸಂದಿಗ್ದತೆಯಲ್ಲಿ, ಕೃಷ್ಣ ತತ್ತ್ವದ ಮೌಲ್ಯದೊಂದಿಗೆ ಕುಟುಂಬದ ಸದಸ್ಯರು ಸಂಭ್ರಮಿಸಿ ಹಬ್ಬದ ವಾತಾವರಣವನ್ನು ನಿಜಾರ್ಥದಲ್ಲಿ ಆಚರಿಸುವುದೇ ಕಲ್ಕೂರ ಪ್ರತಿಷ್ಠಾನದ ಅಶಯ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಅಭಿಪ್ರಾಯ, ಮಾರ್ಗದರ್ಶನ, ಸೂಚನೆಗಳಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸುವಂತೆ ಕೊರಲಾಗಿದೆ.
ದಯಾನಂದ ಕಟೀಲು: 9448545578, ಕದ್ರಿ ನವನೀತ ಶೆಟ್ಟಿ : 9448123061, ಜಾನ್ ಚಂದ್ರನ್: 9844284174
ಎಸ್. ಪ್ರದೀಪ ಕುಮಾರ ಕಲ್ಕೂರ:9845083736
ವಾಟ್ಸ್‌ಅಪ್ ನಂ: 9845062572, ಇಮೈಲ್: pradeep.kalkura@gmail.com

Comments are closed.