ಕರಾವಳಿ

ಆನ್ಲೈನ್ ಮೂಲಕ ಪುಸ್ತಕ ಓದುಗರಿಗೆ ಅನುವು ಮಾಡಿಕೊಟ್ಟಿರುವುದು ಪ್ರಶಂಸನೀಯ : ಜಿ. ಜಗದೀಶ್

Pinterest LinkedIn Tumblr

ಉಡುಪಿ: ಕೋವಿಡ್ -19 ಪ್ರಯುಕ್ತ ಸಾರ್ವಜನಿಕರಿಗೆ ಗ್ರಂಥಾಲಯದ ಉಪಯೋಗ ಪಡೆಯಲು ಅನಾನುಕೂಲವಾಗಿದ್ದರೂ ಕೂಡಾ , ಗ್ರಂಥಾಲಯ ಇಲಾಖೆ ಆನ್ಲೈನ್ ಮೂಲಕ ಸಾರ್ವಜನಿಕ ಓದುಗರಿಗೆ ಪುಸ್ತಕ ಓದಲು ಅನುವು ಮಾಡಿಕೊಟ್ಟಿರುವುದು ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು. ಅವರು ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗೂಗಲ್ ಮೀಟ್ ಮೂಲಕ ನಡೆದ “ಗ್ರಂಥಪಾಲಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿ ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಕಛೇರಿಯಲ್ಲಿ ಡಾ|ಎಸ್. ಆರ್. ರಂಗನಾಥನ್ ಭಾವಚಿತ್ರಕ್ಕೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ ಪುಷ್ಪಾರ್ಚನೆ ಮತ್ತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇನ್ನು ಮುಂದೆ ಶೀಘ್ರವಾಗಿ ಗ್ರಂಥಾಲಯದಲ್ಲಿ ಸಾರ್ವಜನಿಕ ಓದುಗರಿಗೆ ಓದಲು ಅನುಕೂಲವಾಗುವ ಸಲುವಾಗಿ ಕೋವಿಡ್ – 19 ಮಾರ್ಗಸೂಚಿಯನ್ವಯ ಗ್ರಂಥಾಲಯವನ್ನು ಸ್ಯಾನಿಟೈಸ್ ಮಾಡಿ, ಪ್ರತಿಯೊಂದು ಓದುಗರ ದೇಹದ ಉಷ್ಣಾಂಶ ಪರೀಕ್ಷಿಸಿ ಗ್ರಂಥಾಲಯ ಸೇವೆಯನ್ನು ನೀಡಲು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರಿನ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಪ್ರಾಸ್ತಾವಿಕ ಮಾತನಾಡಿ , ಗ್ರಂಥಾಲಯ ಇಲಾಖೆಯು 2020 ನೇ ಫೆಬ್ರವರಿ ತಿಂಗಳಲ್ಲಿ ಸುರೇಶ್ಕುಮಾರ್, ಸಚಿವರು, ಸಾರ್ವಜನಿಕ ಶಿಕ್ಷಣ ಇಲಾಖೆ “ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಪೋರ್ಟಲ್ವನ್ನು ಉದ್ಘಾಟಿಸಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಅದರಲ್ಲಿ ಸದಸ್ಯರಾಗಿ ನೋಂದಾಯಿಸಿಕೊಂಡಿರುತ್ತಾರೆ ಹಾಗೂ ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಆ ಪೋರ್ಟಲ್ ಬಳಸಿ ಪುಸ್ತಕಗಳನ್ನು ಓದುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾರ್ವಜನಿಕರು ಅದರ ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ, ಮೊಬೈಲ್ ಆಪ್ ಮೂಲಕ ಕೂಡಾ ಸದರಿ ಪೋರ್ಟಲನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಪ್ರೊಫೆಸರ್ ಹಾಗೂ ಡೆಪ್ಯೂಟಿ ಚೀಫ್ ಲೈಬ್ರೇರಿಯನ್, ಮಹಾಬಲೇಶ್ವರರಾವ್ ಮಾತನಾಡಿ ಕೋವಿಡ್–19 ಇರುವುದರಿಂದ ಮನೆಯಲ್ಲೇ ಕುಳಿತು ಡಿಜಿಟಲ್ ಗ್ರಂಥಾಲಯಗಳ ಉಪಯೋಗವನ್ನು ಪಡೆಯಲು ಅವಕಾಶ ಲಭ್ಯವಿರುವುದರಿಂದ, ಆದಷ್ಟು ಸಾರ್ವಜನಿಕರು ಇ-ಮ್ಯಾಗಜೀನ್, ಇ-ಪುಸ್ತಕಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕೋವಿಡ್ -19 ವೈರಸ್ನಿಂದ ಜನ ಬಳಲುತ್ತಿರುವುದರಿಂದ, ಧೈರ್ಯ ನೀಡುವ ಸಲುವಾಗಿ ಕೋವಿಡ್-19 ಬಗ್ಗೆ ಅರಿವು ಮೂಡಿಸಲು ಡಾ.ಸುಬ್ರಹ್ಮಣ್ಯ ಭಟ್, ಪ್ರೇರಣಾ ಹೆಲ್ತ್ಕೇರ್, ಕಂಬದಕೋಣೆ, ಬೈಂದೂರು ಉಪನ್ಯಾಸ ನೀಡಿ, ಕೋವಿಡ್ -19 ಗೆ ಜನ ಹೆದರುವ ಅಗತ್ಯವಿಲ್ಲ ಮುಂಜಾಗ್ರತಾ ಕ್ರವiವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ವಚ್ಛತೆಯನ್ನು ಕಾಪಾಡಿಕೊಂಡಲ್ಲಿ ಯಾವುದೇ ಔಷಧಿಯ ಅಗತ್ಯವಿರುವುದಿಲ್ಲ. ಆದಷ್ಟು ಮನೆಯ ತಿಂಡಿ ತಿನಿಸು ತಿಂದು, ಹೊರಗಿನ ಜಂಕ್ ಫುಡ್ಗಳಿಗೆ ಮೊರೆ ಹೋಗದೆ ಜನರು ತಮ್ಮ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದಲ್ಲಿ ಕೊರೋನಾವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ ಕಾರ್ಯಕ್ರಮ ನಿರೂಪಿಸಿದರು, ಜಗದೀಶ್ ಭಟ್ ವಂದಿಸಿದರು.

Comments are closed.