ಕರಾವಳಿ

ದ.ಕ.ಜಿಲ್ಲೆ : ಕುಡಿಯುವ ನೀರು, ನೈರ್ಮಲ್ಯ ಕುರಿತು ಜನ ಜಾಗೃತಿ – ವಸ್ತು ಪ್ರದರ್ಶನ

Pinterest LinkedIn Tumblr

ಮಂಗಳೂರು ಆಗಸ್ಟ್ 05 : ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಇಲಾಖೆ ಹಾಗೂ ಸ್ವಚ್ಛ ಭಾರತ್ ಮೀಷನ್ (ಗ್ರಾ) ಯೋಜನೆಯಡಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ನಡೆದ ಗ್ರ್ರಾಮೀಣ ನೀರು ನೈರ್ಮಲ್ಯ ಸಪ್ತಾಹ ಆಚರಣೆ ಹಾಗೂ ವಸ್ತುಪ್ರದರ್ಶನವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು.

ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಇಲಾಖೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕಾರ್ಯಗತಗೊಳಿಸಿರುವ ಪ್ರಗತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಇಲಾಖೆಯು ಒದಗಿಸುತ್ತಿರುವ ವಿವಿಧ ಸೌಲಭ್ಯಗಳನ್ನು ಸದುಪಯೊಗ ಪಡಿಸಿಕೊಳ್ಳುವ ಹಾಗೂ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.

ಈ “ಗ್ರಾಮೀಣ ನೀರು ನೈರ್ಮಲ್ಯ ಸಪ್ತಾಹ” ಕಾರ್ಯಕ್ರಮವನ್ನು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಚರಿಸಲು ನಿರ್ಧರಿಸಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆಯಬೇಕು ಎಂದರು.

ವಸ್ತು ಪದ್ರರ್ಶನದಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಹಾಗೂ ಸ್ವಚ್ಛ ಭಾರತ್ ಮೀಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಪ್ರಗತಿಯ ಚಿತ್ರಣ, ಮತ್ತು ಕಸಬೇರ್ಪಡಿಸುವಿಕೆ, ಮನೆ ಹಂತದಲ್ಲಿ ತ್ಯಾಜ್ಯ ನಿರ್ವಹಣೆಯ ವಿಧಾನಗಳಾದ ಪೈಪ್ ಕಾಂಪೋಸ್ಟ್, ಫಿಟ್ ಕಾಂಪೋಸ್ಟ್, ಬಯೋಬಿನ್ ಮಡಕೆ ಗೊಬ್ಬರ, ಬಯೋಗ್ಯಾಸ್‍ನ ಪ್ರಾತ್ಯಕ್ಷಿಕೆ, ಘನತ್ಯಾಜ್ಯ ಘಟಕದ ಕಾರ್ಯನಿರ್ವಹಣೆಯ ಮಾದರಿ, ಪ್ಲಾಸ್ಟಿಕ್ ಬಳಕೆಯಿಂದ ಸಾಕು ಪ್ರಾಣಿಗಳಿಗೆ ಆಗುವ ಸಮಸ್ಯೆ ಕುರಿತಾದ ಮಾದರಿಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ ಆರ್. ಉಪಸ್ಥಿತರಿದ್ದರು.

Comments are closed.