ಉಡುಪಿ: ‘ಅಯೋಧ್ಯೆಯಲ್ಲಿರುವ ರಾಮ ಮಂದಿರವು ಇಡೀ ಹಿಂದೂ ಸಮಾಜದ ಕನಸಾಗಿದ್ದು ಆಗಸ್ಟ್ 5 ರಂದು ನಡೆಯುವ ಭವ್ಯ ದೇವಾಲಯದ ಭೂಮಿ ಪೂಜೆಯ ಸಮಾರಂಭವನ್ನು ಪ್ರತಿಯೊಬ್ಬರು ಹಬ್ಬವಾಗಿ ಆಚರಿಸಬೇಕು” ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ (ರಿ.) ವಿಶ್ವಸ್ಥಮಂಡಳಿ ಸದಸ್ಯರಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಧರ್ಮಶ್ರದ್ಧೆಯುಳ್ಳ ಮನೆ ಮನಸ್ಸುಗಳಲ್ಲಿ ಶ್ರೀ ರಾಮ- ಶ್ರೀ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು ಮತ್ತು ಇದು ಅಯೋಧ್ಯೆಯ ಭವ್ಯ ಮಂದಿರ ನಿರ್ಮಾಣಗೊಂಡು ಶ್ರೀ ಸೀತಾ-ರಾಮರ ಪ್ರತಿಷ್ಠಾಪನೆ ಪರ್ಯಂತ ನಿತ್ಯವೂ ವಿಶೇಷ ಜಾಗೃತವಾಗಿರಬೇಕು ಎಂದು ಶ್ರೀಪಾದರು ಕರೆ ನೀಡಿದ್ದಾರೆ.

ಭಗವಂತ ರಾಮನ ಆರಾಧನೆಯನ್ನು ನಾವು ಮುಂದುವರೆಸಬೇಕು. ಕೊರೊನಾ ಪರಿಸ್ಥಿತಿಯ ಸಂದರ್ಭದಲ್ಲಿಯೂ ಈ ಐತಿಹಾಸಿಕ ದಿನವನ್ನು ವೀಕ್ಷಿಸ ಬಹುದಾಗಿದೆ. ಜನರು ತಮ್ಮ ಮನೆಗಳಲ್ಲಿ ನೇರ ಪ್ರದರ್ಶನವನ್ನು ವೀಕ್ಷಿಸಬಹುದು” ಎಂದು ಅವರು ಹೇಳಿದರು. ಜನರು ಶ್ರೀ ರಾಮ ಮಂತ್ರವನ್ನು ಪ್ರತಿದಿನ ಕನಿಷ್ಠ 108 ಬಾರಿ ಜಪಿಸಬೇಕು. ಪಾರಾಯಣ ಮತ್ತು ಭಜನೆ ಮಾಡಬೇಕು. ಭಕ್ತರು ರಾಮನ ನಾಮ ಸ್ಮರಣೆ ಮಾಡಬೇಕು. ನಾವೆಲ್ಲರೂ ಈ ಆಚರಣೆಯಲ್ಲಿ ಭಾಗವಹಿಸೋಣ ಎಂದು ಹೇಳಿದರು.
ಆಗಸ್ಟ್ 5 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದೆ. ಅಂದು ನೀಲಾವರ ಗೋಶಾಲೆಯಲ್ಲಿ ಶ್ರೀ ರಾಮ, ಕೃಷ್ಣ, ವಿಟ್ಟಲರಿಗೆ ಒಂದು ಲಕ್ಷ ತುಳಸಿ ಎಲೆಗಳನ್ನು ಅರ್ಪಿಸಲಾಗುವುದು. ಈ ಪೂಜೆಗೆ ಭಕ್ತರು ಆಗಸ್ಟ್ 4 ರ ಮಧ್ಯಾಹ್ನಕ್ಕೂ ಮುನ್ನ ತುಳಸಿ ಎಲೆಗಳನ್ನು ಪೇಜಾವರ ಮಠ ಉಡುಪಿ ಅಥವಾ ನೀಲಾವರ ಗೋಶಾಲೆಗೆ ತಂದು ಅರ್ಪಿಸಬಹುದು. ಅದೇ ದಿನ ನವಗ್ರಹ ಯಾಗ ಮತ್ತು ಮುಖ್ಯಾಪ್ರಾಣ ಯಾಗ, ಭಜನೆ, ಮತ್ತು ಪಾರಾಯಣ ನಡೆಯಲಿದೆ. ಕರ್ನಾಟಕದ ಉಡುಪಿ ಹಾಗೂ ಅಯೋಧ್ಯೆಯ ನಡುವೆ ನಿಕಟ ಸಂಬಂಧವಿದೆ ಎಂದು ನಾನು ನಂಬುತ್ತೇನೆ. ಈ ಚಳುವಳಿಯನ್ನು ಕೃಷ್ಣೈಕ್ಯರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕೊನೆಯವರೆಗೂ ಮುನ್ನಡೆಸಿದರು ಎಂದು ಸ್ವಾಮೀಜಿ ಹೇಳಿದರು.
ಇದು ಹಿಂದೂ ಸಮಾಜದ ಎಲ್ಲ ಜನರಿಗೆ ಐತಿಹಾಸಿಕ ದಿನವಾಗಲಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಲಂಕಾರ ಮಾಡಿ, ಭಗಧ್ವಜವನ್ನು ಮನೆಯ ಛಾವಣಿಯ ಮೇಲೆ ಹಾಕಬೇಕು. ಹಾಗೆಯೇ ಮನೆಯಲ್ಲಿ ದೀಪವನ್ನು ಬೆಳಗಬೇಕು. ಹಾಗೆಯೇ ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಬಜರಂಗದಳ ಪ್ರಾಂತ ಸಹಸಂಚಾಲಕ ಸುನಿಲ್ ಕೆ. ಆರ್ ಹೇಳಿದರು.
ಇನ್ನು ಅಯೋಧ್ಯೆಯ ಭೂಮಿ ಪೂಜೆಯಲ್ಲಿ ಪೇಜಾವರ ಸ್ವಾಮೀಜಿಯವರು ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ಪ್ರಸ್ತುತ ನೀಲಾವರ ಗೋಶಾಲೆಯಲ್ಲಿ ಚಾರ್ತುಮಾಸ ವ್ರತವನ್ನು ನಡೆಸುತ್ತಿದ್ದು ಶಾಸ್ತ್ರಗಳ ಪ್ರಕಾರ, ಈ ಚಾರ್ತುಮಾಸ ವ್ರತದ ಅವಧಿ ಮುಗಿಯುವವರೆಗೂ ಸ್ಥಳ ಅಥವಾ ಮಠವನ್ನು ಬಿಟ್ಟುಹೋಗುವಂತಿಲ್ಲ. ಆ ಕಾರಣ ಗೋಶಾಲೆಯಲ್ಲಿ ಪೂಜೆ ಮಾಡುವ ಮೂಲಕ ಭೂಮಿ ಪೂಜೆಯ ದಿನವನ್ನು ಆಚರಿಸುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃ ಶಕ್ತಿ ಮಂಡಳಿಯ ಪೂರ್ಣಿಮಾ ಸುರೇಶ್ ನಾಯಕ್ ಮತ್ತು ಭಜರಂಗದಳದ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.
Comments are closed.