ಕರಾವಳಿ

ಬಿಲ್ಲವರ ಅಸ್ಸೋಸಿಯೇಷನ್ ಮುಂಬಯಿ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಎ. ಶಾಂತಿ ನೇಮಕ

Pinterest LinkedIn Tumblr

ಮುಂಬಯಿ : ಮುಂಬಯಿಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸ್ಸೋಸಿಯೇಷನ್ ಮುಂಬಯಿ ಇದರ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಯಾಗಿ ಸಂಘಟಕ, ಸಮಾಜ ಸೇವಕ, ಭುವಾಜಿ, ಪುರೋಹಿತ ರವೀಂದ್ರ ಎ. ಶಾಂತಿ ಯವರು ನಿಯುಕ್ತಿ ಗೊಂಡಿರುರುವರು.

ಮೂಲತಃ ಇವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಫಲಿಮಾರು ಗ್ರಾಮದ ನಡಿಯಾರ್ ದಿವಂಗತ ಐತಪ್ಪ ಅಮೀನ್ ಮತ್ತು ಸಸಿಹಿತ್ಲು ಅಳಿವೆ ಕೋಡಿ ಯ ದಿವಂಗತ ಕಮಲಾ ರವರ ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಂಸಾರದಲ್ಲಿ ಕೊನೆಯ ಪುತ್ರ ರಾಗಿದ್ದು ಪ್ರಾರ್ಥಮಿಕ ಶಿಕ್ಷಣವನ್ನು ಫಲಿಮಾರು ಶಾಲೆಯಲ್ಲಿ ನೆರವೇರಿಸಿದರು.

ನಂತರ ಉದರ ಪೋಷಣೆಗಾಗಿ ಬೊಂಬಾಯಿಗೆ ಆಗಮಿಸಿದ ಇವರು ಕ್ಯಾಂಟೀನ್ ನಲ್ಲಿ ದುಡಿಯುತ್ತ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಹೈಸ್ಕೂಲ್ ಶಿಕ್ಷಣ ವನ್ನು ಫೋರ್ಟ್ ನ ಯಂಗ್ ಮೆನ್ಸ್ ನೈಟ್ ಹೈಸ್ಕೂಲ್ ನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಕನ್ನಡ ಭವನ ಎಜುಕೇಷನ್ ಸೊಸೈಟ್ ಯಲ್ಲಿ ಪೂರೈಸಿ ನಂತರ ಸಿದ್ಧಾರ್ಥ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಇದರೊಂದಿಗೆ ತನ್ನದೇ ಆದ ಕ್ಯಾಂಟೀನ್ ಮತ್ತು ಹೋಟೆಲ್ ಉದ್ಯಮವನ್ನು ಆರಂಭಿಸಿ, ನಂತರ ರವಿಕಮಲ್ ಕ್ಯಾಟರರ್ಸ್ ಸರ್ವಿಸ್ ನ್ನು ಆರಂಭಿಸಿ ಈಗಲೂ ಮುಂದುವರಿಸುತ್ತಿದ್ದಾರೆ.

ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ಮುಂಬಯಿ ಮತ್ತು ತವರಿನ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿರುವರು. ಕಾಲೇಜಿನ ದಿನಗಳಲ್ಲಿಯೇ ಕಲಾ ಸೇವೆಗಾಗಿ ಸ್ಥಾಪನೆಯಾದ ಜಗಜ್ಯೋತಿ ಕಲಾ ವೃಂದದ ಸ್ಥಾಪಕ ಸದಸ್ಯರಾಗಿದ್ದು ನಂತರ ಆರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡ ಸಂಘ ಸಂತಕ್ರೂಜ್ ನ ಪದಾಧಿಕಾರಿಯಾಗಿದ್ದು ಸೇವೆ ಸಲ್ಲಿಸಿರುವ ಇವರು ಫಲಿಮಾರು ಗ್ರಾಮದ ಕೊಂಡಂಚಲ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನದ ಗೌರವ ಪ್ರಧಾನ ಕಾರ್ಯದರ್ಶಿ ಯಾಗಿದ್ದು ಇದರ ಜೀರ್ಣೋದ್ಧಾರದ ಸಮಯ ಮಹತ್ತರವಾದ ಪಾತ್ರ ನಿರ್ವಹಿಸಿದ್ದರು. ಹಾಗೂ ಸಸಿಹಿತ್ಲು ಅಳಿವೆಕೋಡಿ ಕಾಂತೇರಿ ಧೂಮವತಿ ದೈವಸ್ಥಾನದ ಜೀರ್ಣೋದ್ಧಾರ ಇವರ ಮುಂದಾಳತ್ವದಲ್ಲಿ ವಿಜೃಂಭಣೆಯಿಂದ ನಡೆದಿತ್ತು.

ಕಲಾವಿದರು ಆಗಿರುವ ಇವರು ರಾಘವೇಂದ್ರ ಕಲಾ ಮಂಡಳಿ, ಕಲಿನ ಹಾಗೂ ಉಮಾ ಮಹೇಶ್ವರಿ ಕಲಾ ವೃಂದ ಜರಿಮರಿಯಲ್ಲಿ ಹವ್ಯಾಸಿ ಕಲಾವಿದರಾಗಿ ನಾಟಕರಂಗದಲ್ಲೂ ಕಲಾ ಸೇವೆಗೈದಿರುವರು. ಹದಿನೈದು ವರ್ಷಗಳ ಕಾಲ S. E. O. ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಮುಂಬಯಿಯ ತುಳು ಕನ್ನಡಿಗರ ಪ್ರಮುಖ ಮಂದಿರ ಗಳಲ್ಲಿ ಒಂದಾಗಿರುವ ಬಿ. ಕೆ. ಶೀನ ರವರ ಜರಿಮರಿ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಹಲವಾರು ವರ್ಷ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ರುವ ಇವರು ಪ್ರಸ್ತುತ ಇದರ ಉಮಾ ಮಹೇಶ್ವರಿ ಭಜನಾ ಮಂಡಳಿ ಮತ್ತು ಬಿಲ್ಲವ ಭವನದ ಗುರುನಾರಾಯಣ ಭಜನಾ ಮಂಡಳಿಯ ಭುವಾಜಿ ಯಾಗಿ ಸೇವೆ ಸಲ್ಲಿಸುತ್ತಿದ್ದು. ತನ್ನದೇ ಭಜನಾ ತಂಡವನ್ನು ರಚಿಸಿ ಮುಂಬಯಿ ಮಾತ್ರವಲ್ಲದೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಭಜನಾ ಸೇವೆಯನ್ನು ಸಲ್ಲಿಸಿರುವರು.

ಇದರಲ್ಲಿ ಪ್ರಮುಖವಾಗಿ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಫಲಿಮಾರು ಮಠಾಧೀಶರ ಪರ್ಯಾಯ ಸಂದರ್ಭದಲ್ಲಿ ನಡೆದ ಎರಡು ವರ್ಷಗಳ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಎರಡು ದಿನಗಳ ಭಜನಾ ಸೇವೆ ಸಲ್ಲಿಸಿರುವರು. ಶ್ರೀ ಕ್ಷೇತ್ರ ತಿರುಪತಿ ತಿರುಮಲ ತಿಮ್ಮಪ್ಪನ ಸಾನಿಧ್ಯದಲ್ಲಿ ದಾಸ ಸಾಹಿತ್ಯ ಪ್ರೊಜೆಕ್ಟ್ನಲ್ಲಿ ಸತತ ಆರು ವರ್ಷಗಳಿಂದ ಪ್ರತಿ ವರ್ಷ ಎರಡು ದಿನಗಳ ನಿತ್ಯೋತ್ಸವ ಹಾಗೂ ಗರುಡೋತ್ಸವ ಸಂದರ್ಭದಲ್ಲಿ ಹರಿನಾಮ ಸಂಕೀರ್ತನೆಯಲ್ಲಿ ಪಾಲ್ಗೊಂಡು ತಿರುಪತಿ ತಿಮ್ಮಪ್ಪ ದೇವರ ಕೃಪೆಗೊ ಪಾತ್ರರಾಗಿದ್ದಾರೆ.

ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ಅಪಾರ ಭಕರಾಗಿರುವ ಇವರು ಯಜಮಾಡಿ ಬಿಲ್ಲವ ಸಂಘ ಅಯ್ಯಪ್ಪ ಭಕ್ತ ವೃಂದದ ಸುಭಾಷ್ ಗುರುಸ್ವಾಮಿ ಹಾಗೂ ಮುಂಬೈ ಅಂಧೇರಿ ಯ ವಿಶ್ವನಾಥ ಗುರುಸ್ವಾಮಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಅದಿನೆಂಟನೆ ಮಾಲೆ ಯನ್ನು ಪೂರೈಸಿದ್ದು, ದೇಶದಾದ್ಯಂತ ಹಲವಾರು ತೀರ್ಥ ಕ್ಷೇತ್ರಗಳ ಸಂದರ್ಶನ ಮಾಡಿರುವರು.

ಬಾಲ್ಯದಲ್ಲಿಯೇ ವೈದಿಕ ಕಾರ್ಯಗಳಲ್ಲಿ ಆಸಕ್ತಿ ಇದ್ದ ಇವರು ಬಿಲ್ಲವ ಭವನ ಉದ್ಘಾಟನಾ ಸಮಯದಲ್ಲಿ ಶ್ರೀ ಪುರುಷೋತ್ತಮ ಭಟ್ ಇವರಿಂದ ಬ್ರಹ್ಮಉಪದೇಶವನ್ನು ಪಡೆದು, ಹೆಚ್ಚಿನ ವೈದಿಕ ಶಿಕ್ಷಣ ವನ್ನು ಕಾರ್ಕಳ ಶ್ರೀ ಕೃಷ್ಣಮಠದ ಶ್ರೀ ಸದಾನಂದ ಶಾಂತಿಯವರ ಮಾರ್ಗದರ್ಶನದಲ್ಲಿ ಪಡೆದು ಅಲ್ಲಿಯವರೆಗೆ ರವೀಂದ್ರ ಎ. ಅಮೀನ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಇವರು ರವೀಂದ್ರ ಶಾಂತಿ ಎಂಬ ನಾಮ ದೀಕ್ಷೆಯನ್ನು ಪಡೆದು ಪ್ರಸ್ತುತ ಎಲ್ಲಾ ತರದ ವೈದಿಕ ಪೂಜಾ ವಿಧಿಗಳನ್ನು ನೆರವೇರಿಸುತ್ತಾರೆ.

ಸಮಾಜ ಸೇವೆಯಲ್ಲಿ ತೊಡಗಿರುವ ಇವರು ಜಯ ಸಿ. ಸುವರ್ಣರು ಬಿಲ್ಲವರ ಅಸ್ಸೋಸಿಯೇಷನ್ ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂದಿನಿಂದ ಅವರ ಮಾರ್ಗದರ್ಶನದಲ್ಲಿ ಈವರಗೆ ಅಸ್ಸೋಸಿಯೇಷನ್ ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಧಾರ್ಮಿಕ ಹಾಗೂ ಸಾಮಾಜಿಕ ಉಪಸಮಿತಿಯಲ್ಲಿ ಕಾರ್ಯದರ್ಶಿಯಾಗಿ, ಯುವ ವಿಭಾಗ ಉಪಸಮಿತಿಯಲ್ಲಿ ಕಾರ್ಯದರ್ಶಿಯಾಗಿ, ಗುರು ನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಕಾರ್ಯದರ್ಶಿ ಹಾಗೂ ಕಾರ್ಯಧ್ಯಕ್ಷ ರಾಗಿ ಸೇವೆ ಸಲ್ಲಿಸಿರುವ ಅನುಭವದೊಂದಿಗೆ ಅಸ್ಸೋಸಿಯೇಷನ್ ನ ಗೌರವ ಜೊತೆ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದ ಇವರ ಸೇವಾ ಮನೋಭಾವವನ್ನು ಪರಿಗಣಿಸಿ ಅಸ್ಸೋಸಿಯೇಷನ್ ನ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ ಯವರು ಇವರನ್ನು ಗೌರವ ಪ್ರಧಾನ ಕಾರ್ಯದರ್ಶಿ ಯಾಗಿ ನಿಯುಕ್ತಿ ಗೊಳಿಸಿರುತ್ತಾರೆ.

ವರದಿ : ಈಶ್ವರ್ ಎಂಐಎಲ್

Comments are closed.