ಕರ್ನಾಟಕ

ಕೊರೋನಾ ಹಾಟ್’ಸ್ಪಾಟ್ ನಗರವಾದ ಬೆಂಗಳೂರು; ಲಾಕ್ಡೌನ್ ವಿಸ್ತರಣೆಗೆ ಹೆಚ್ಚಿದ ಧ್ವನಿ

Pinterest LinkedIn Tumblr

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಭಾರತದ ನೂತನ ಕೊರೋನಾ ಹಾಟ್’ಸ್ಟಾಟ್ ನಗರವೆಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧ ದಿಟ್ಟ ಹೋರಾಟ ಮಾಡಲು ನಗರದಲ್ಲಿ ಲಾಕ್ಡೌನ್ ಮುಂದುವರೆಸುವಂತೆ ಧ್ವನಿಗಳು ಹೆಚ್ಚಾಗಿವೆ.

ದೇಶದಲ್ಲಿ ಶುಕ್ರವಾರ ಒಂದೇ ದಿನ 34,956 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು ಒಂದೇ ದಿನ 687 ಮಂದಿ ಬಲಿಯಾಗಿದ್ದಾರೆ.

ಈ ನಡುವೆ ಕರ್ನಾಟದಲ್ಲಿ ನಿನ್ನೆ ಒಂದೇ ದಿನ 4,169 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 104 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,000ಕ್ಕೇರಿಕೆಯಾಗಿದ್ದು, ಸಾವಿನ ಸಂಖ್ಯೆ ಕೂಡ 1,000 ಗಡಿ ದಾಟಿದೆ.

ಈ ಪೈಕಿ ಬೆಂಗಳೂರು ನಗರ ಒಂದರಲ್ಲಿಯೇ ಗುರುವಾರ 2344 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕು 25 ಸಾವಿರ ಗಡಿ ದಾಟಿ 25,288ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 70 ಮಂದಿ ಸೋಂಕಿಗೆ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 500 ಗಡಿ ದಾಟಿ ಆತಂಕ ಸೃಷ್ಟಿಯಾಗಿದೆ. ಇದರೊಂದಿಗೆ ಸಿಲಿಕಾನ್ ಸಿಟಿ ಇದೀಗ ಭಾರತದ ನೂತನ ಕೊರೋನಾ ಹಾಟ್’ಸ್ಪಾಟ್ ನಗರವೆಂಬ ಕುಖ್ಯಾತಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೊರೋನಾಗೆ ಈವರೆಗೆ 1032 ಮಂದಿ ಸಾವನ್ನಪ್ಪಿದ್ದು, ಅವರದಲ್ಲಿ ಅರ್ಧದಷ್ಟು ಮಂದಿ ಕೇವಲ 1 ವಾರದಲ್ಲಿಯೇ ಮೃತಪಟ್ಟಿದ್ದಾರೆಂಬುದು ಆತಂಕದ ವಿಚಾರವಾಗಿದೆ. ಜು.11ರಿಂದೀಚೆಗೆ ನಿತ್ಯವೂ ಸಾವಿನ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ನೂರಾರು ಜನ ಸೋಂಕಿತರು ಗಂಭೀರವಾಗಿ ಅಸ್ವಸ್ಥರಾಗಿ ಐಸಿಯುನಲ್ಲಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಾಲಗುತ್ತಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಲಾಕ್’ಡೌನ್ ಮುಂದುವರೆಸಬೇಕು. ಒಟ್ಟು 14 ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಬೇಕೆಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ, ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮುಂದುವರೆಸಲು ಮುಖ್ಯಮಂತ್ರಿಗಳಿಗೆ ಮನಸಿಲ್ಲ ಎನ್ನಲಾಗಿದೆ.

ಈಗಾಗಲೇ ಕೊರೋನಾ ಚೈನ್ ಲಿಂಕ್ ಕಟ್ ಆಗುವ ಪ್ರಕ್ರಿಯೆ ಶುರುವಾಗಿದೆ. ಸಾಮಾನ್ಯವಾಗಿ ಕ್ವಾರಂಟೈನ್ ಅಂದರೆ 14 ದಿನ. ಆದರೆ, ಇತ್ತೀಚೆಗೆ ಈ ಸಂಖ್ಯೆ 7 ದಿನಗಳಾಗಿವೆ. ಹೀಗಾಗಿ ಯಾರು ಎಷ್ಟು ದಿನ ಕ್ವಾರಂಟೈನ್ ಆಗಿ ಹೊರಗೆ ಬಂದು ಓಡಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಸಂಪೂರ್ಣವಾಗಿ 14 ದಿನ ಎಲ್ಲರೂ ಮನೆಯಲ್ಲಿದ್ದರೆ, ಕೊರೋನಾ ಚೈನ್ ಲಿಂಕ್ ಕಟ್ ಆಗಬಹುದು.

ಚೈನ್ ಲಿಂಕ್ ಕಟ್ ಆಗಲು ಲಾಕ್ಡೌನ್ ಅಗತ್ಯವಿದೆ. ನನ್ನ ಪಿಎಗೂ ಕೊರೋನಾ ಪಾಸಿಟಿವ್ ಬಂದಿತ್ತು. ಹೀಗಾಗಿ ನಾನು ಕ್ವಾರಂಟೈನ್ ಆಗಿ ಮನೆಯಿಂದ ಹೊರಗೆ ಬಂದಿದ್ದೇನೆ. 14 ದಿನ ಕಟ್ಟುನಿಟ್ಟಾಗಿ ಲಾಕ್ಡೌನ್ ಮಾಡಿದರೆ ಕೊರೋನಾ ಮಟ್ಟಹಾಕಲು ಸಹಾಯಕವಾಗುತ್ತದೆ. ಹೀಗಾಗಿ ಲಾಕ್ಡೌನ್ ಮುಂದುವರೆಸುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಗೌತಮ್ ಕುಮಾರ್ ಅವರು ಒತ್ತಾಯಿಸಿದ್ದಾರೆ.

ಲಾಕ್ಡೌನ್ ಮುಂದುವರೆಸುವಂತೆ ಧ್ವನಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ, ಅಷ್ಟದಿಕ್ಪಾಲಕ ಉಸ್ತುವಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಸಭೆ ಬಳಿಕ ತಮ್ಮ ನಿರ್ಣಯವನ್ನು ಘೋಷಣೆ ಮಾಡಲಿದ್ದಾರೆ.

ಇನ್ನು ಸಭೆಗೂ ಮುನ್ನ ಡಿಸಿಎಂ ಅಶ್ವತ್ಥ್ ನಾರಾಯಣ್ ಜೊತೆಗೆ ಮಾತನಾಡಿದ್ದ ಯಡಿಯೂರಪ್ಪ ಅವರು ಮತ್ತೆ ನಗರದಲ್ಲಿ ಲಾಕ್ಡೌನ್ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಬಿಬಿಎಂಪಿ ಮೇಯರ್ ಲಾಕ್ಡೌನ್ ಮುಂದುವರೆಸುವಂತೆ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಹಾಗೂ ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Comments are closed.