ಕರಾವಳಿ

ಗುರುಗಳ ಅನುಗ್ರಹ ಸದಾ ನಮ್ಮೊಂದಿಗೆ ಇರಲಿ : ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ

Pinterest LinkedIn Tumblr

ಮಂಗಳೂರು : ನಮ್ಮಲ್ಲಿ ಎಷ್ಟೇ ಸಂಪತ್ತು ಸವಲತ್ತು ಇದ್ದರೂ ಗುರುಗಳ ಅನುಗ್ರಹ ಹಾಗೂ ದೇವರ ಅನುಗ್ರಹ ಇಲ್ಲದಿದ್ದಲ್ಲಿ ಅದನ್ನು ಅನುಭವಿಸುವುದು ಅಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ನುಡಿದರು.

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರ್ರಾಸಾದ ವಾದಿರಾಜ ಮಂಟಪದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು.

ತಮ್ಮ ಗುರುಗಳಾದ ಹರಿಪಾದಗೈದಿರುವ ಪೂಜ್ಯ ಶ್ರೀ ವಿಶ್ವೇಶತೀರ್ಥರು ತಮ್ಮ ಹೆಸರಿಗೆ ಅನ್ವರ್ಥ ಎಂಬಂತೆ ಮಾತಲ್ಲೂ ಕೃತಿಯಲ್ಲೂ ನಡೆದು ತೋರಿಸಿದವರು. ತುಂಡು ಬಟ್ಟೆಯುಟ್ಟು ದೇಶವ್ಯಾಪಿ ಸಂಚಾರ ನಡೆಸಿ ಸರ್ವ ಧರ್ಮೀಯರ ಪ್ರೀತಿ ಪಾತ್ರರಾಗಿದ್ದರು. ಪೂಜ್ಯರ ಅನುಗ್ರಹ ಸದಾ ನಮ್ಮೊಂದಿಗೆ ಇರಲೆಂದು ಸ್ವಾಮೀಜಿ ಪ್ರಾರ್ಥಿಸಿದರು.

ಹರಿಪಾದಗೈದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರ ಸಂಸ್ಮರಣೆಗೈದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಪೂಜ್ಯ ವಿಶ್ವೇಶತೀರ್ಥರ ಜೀವನ ಶ್ರದ್ಧೆ, ಮುಗ್ದ ಮಗುವಿನ ಮನಸ್ಸಿನಿಂದ ಭಾರತೀಯ ಸಂಪ್ರದಾಯದಲ್ಲಿ ಅವರು ಮಾಡಿರುವ ಬಹುದೊಡ್ಡ ಕ್ರಾಂತಿಯನ್ನು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ನೀಲಾವರದ ಗೋಶಾಲೆಯಲ್ಲಿ ಚಾತುರ್ಮಾಸ ನಿರತರಾಗುವ ಶ್ರೀ ವಿಶ್ವಪ್ರಸನ್ನ ತೀರ್ಥರ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ಗುರು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವೇ. ಮೂ. ಗಣಪತಿ ಆಚಾರ್ಯ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರೋ| ಎಂ. ಬಿ. ಪುರಾಣಿಕ್, ಜಿ. ಸೀತಾರಾಮ ಆಚಾರ್ಯ ಲಕ್ಷ್ಮೀದಾಸ್, ಸುರೇಶ್ ಬಾರಿತ್ತಾಯ, ಪ್ರಭಾಕರ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಬೆಳಿಗ್ಗೆ ಶ್ರೀ ರಾಮ ವಿಟ್ಠಲ ದೇವರ ಮಹಾ ಪೂಜೆ ನಡೆಯಿತು.

Comments are closed.