ಕರಾವಳಿ

ಬಂಗ್ಲಗುಡ್ಡೆ ಮಕ್ಕಳ ಮೃತ್ಯು ಪ್ರಕರಣ : ಪ್ರಮಾದಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ – ಸಂಸದ ಕಟೀಲ್

Pinterest LinkedIn Tumblr

ಮಂಗಳೂರು, ಜುಲೈ 05 : ಭಾರೀ ಮಳೆಯಿಂದಾಗಿ ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಇಂದು ಗುಡ್ಡ ಕುಸಿದ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿರುವ ಅವರು, ಕುಟುಂಬಸ್ಥರ ಅಳಲು ಆಲಿಸಿದರು. ಈ ಸಂದರ್ಭ ಸಂಸದರಿಗೆ ಮಾಹಿತಿ ನೀಡಿದ ಸ್ಥಳೀಯರು ಗುಡ್ಡ ಬಿರುಕು ಬಿಟ್ಟಿರುವ ಬಗ್ಗೆ ನಾವು ಈಗಾಗಲೇ ಸ್ಥಳೀಯ ಪಂಚಾಯತ್ ಗೆ ಮಾಹಿತಿ ನೀಡಲಾಗಿದೆ. ಆದರೆ, ಸ್ಥಳೀಯ ಪಂಚಾಯತ್ ನವರು ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಅವಘಡ ನಡೆದಿದೆ ಎಂದು ಸಂಸದರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಂಸದರು, ಗುಡ್ಡಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಪ್ರಮಾದ ನಡೆದಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡಲಾಗುವುದು. ಏನಾದರೂ ಪ್ರಮಾದಗಳಾಗಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ಥಳದಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯಾ ನಡೆಯುತ್ತಿದೆ. ಸದ್ಯಕ್ಕೆ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಉಪಸ್ಥಿತರಿದ್ದಾರೆ. ರಕ್ಷಿಸಿದವರನ್ನು ಸ್ಥಳೀಯ ಗಂಜಿ ಕೇಂದ್ರಕ್ಕೆ ರವಾನಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ರಕ್ಷಣಾ ಕಾರ್ಯ ಮುಗಿದಿದ್ದು, ಇದೀಗ ಘಟನಾ ಸ್ಥಳದಲ್ಲಿನ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ ಎಂದು ಸಂಸದರು ತಿಳಿಸಿದರು.

Comments are closed.