ಗಂಗಾವತಿ: ಕೋವಿಡ್-19 ಪಾಸಿಟಿವ್ ಬಂದ ನಂತರ ಸರಕಾರಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಬೇಕಾಗಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಪಾಸಿಟಿವ್ ಬಂದ ಮಹಿಳೆ ಮನೆಯಿಂದ ಎರಡು ಕಿ.ಮೀ ದೂರ ನಡೆದುಕೊಂಡು ಬಂದ ಮಹಿಳೆಯು ಗಂಗಾವತಿ ಕೋವಿಡ್-19 ಆಸ್ಪತ್ರೆಗೆ ದಾಖಲಾದ ಪ್ರಸಂಗ ಗಂಗಾವತಿ ನಗರದ ಮುರಾರಿ ಕ್ಯಾಂಪ್ ನಲ್ಲಿ ಜರುಗಿದೆ.
33 ವರ್ಷದ ಮಹಿಳೆಗೆ ಕೋವಿಡ್-19 ಪಾಸಿಟಿವ್ ದೃಢವಾಗಿದ್ದು, ನೀವೆ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಎಂದು ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಮಹಿಳೆಯ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಒಂದು ವೇಳೆ ಆ್ಯಂಬುಲೆನ್ಸ್ ಮನೆ ಹತ್ತಿರ ಬಂದರೆ ಗಲಾಟೆ ಆಗುತ್ತದೆ, ನೀವೇ ಬಂದು ಆನೆಗೊಂದಿ ರಸ್ತೆಯಲ್ಲಿನ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ಎನ್ನುವ ಸಬೂಬು ನೀಡಿದ್ದಾರೆ.
ಸೋಂಕಿತ ಮಹಿಳೆ ಆಟೋದಲ್ಲಿ ಹೋಗುವುದು ಬೇಡ ಇತರರಿಗೆ ತೊಂದರೆಯಾಗುತ್ತದೆ ಎಂದು ಆನೆಗೊಂದಿ ರಸ್ತೆಯಲ್ಲಿನ ಆಸ್ಪತ್ರೆಗೆ 2 ನಡೆದುಕೊಂಡು ಬಂದಿರುವುದಾಗಿ ಪಾಸಿಟಿವ್ ಬಂದಿರುವ ಮಹಿಳೆಯ ಪತಿ ಉದಯವಾಣಿ ಗೆ ತಿಳಿಸಿದ್ದಾರೆ.
ಕೋವಿಡ್-19 ಪಾಸಿಟಿವ್ ಬಂದ ಮಹಿಳೆಗೆ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದು ಸರಿಯಲ್ಲ. ಪಾಸಿಟಿವ್ ಬಂದವರನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಬೇಕು. ಮುರಾರಿ ಕ್ಯಾಂಪ್ ನ ಮಹಿಳೆ ನಡೆದುಕೊಂಡು ಬಂದು ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಡಿಸಿ ಸುರಳ್ಕರ್ ವಿಕಾಸ ಕಿಶೋರ್ ತಿಳಿಸಿದ್ದಾರೆ.
ಕೋವಿಡ್ ಸೋಂಕಿತರನ್ನು ಸರಿಯಾಗಿ ನಡೆಸಿಕೊಳ್ಳದೆ, ಆ್ಯಂಬುಲೆನ್ಸ್ ಕಳುಹಿಸದೆ ಮಹಿಳೆಯನ್ನು ನಡೆಸಿಕೊಂಡು ಆಸ್ಪತ್ರೆಗೆ ಕರೆಸಿಕೊಂಡ ಆಸ್ಪತ್ರೆ ಅಧಿಕಾರಿಗಳ ಉದ್ಧಟತನ ಮತ್ತು ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Comments are closed.