ರಾಷ್ಟ್ರೀಯ

ಮುಸ್ಲಿಂ ಧರ್ಮ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ ಕನಿಷ್ಠ 10 ಸಾವಿರ ಜನ ಭಾಗಿ: 3 ಹಳ್ಳಿಗಳು ಸೀಲ್‌ಡೌನ್‌

Pinterest LinkedIn Tumblr


ದಿಸ್ಪುರ (ಅಸ್ಸಾಂ): ದೇಶದಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯ ನಡುವೆಯೂ ಮುಸ್ಲಿಂ ಧರ್ಮ ಪ್ರಚಾರಕರೊಬ್ಬರ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ 10 ಸಾವಿರ ಜನ ಸೇರಿರುವ ಘಟನೆ ಅಸ್ಸಾಂನ ನಾಗವಾನ್‌ ಜಿಲ್ಲೆಯಲ್ಲಿ ನಡೆದಿದೆ. ಈ ಹಿನ್ನೆಲೆ ಶನಿವಾರ ಮೂರು ಗ್ರಾಮಗಳನ್ನು ಜಿಲ್ಲಾಡಳಿತ ಸೀಲ್‌ಡೌನ್‌ ಮಾಡಿದೆ.

ಜುಲೈ 02ರ ಮಧ್ಯಾಹ್ನ ಆಲ್‌ ಇಂಡಿಯಾ ಜಮೈತ್‌ ಉಲೆಮಾ ಮತ್ತು ಈಶಾನ್ಯಕ್ಕಾಗಿ ಆಮಿರ್‌ ಇ ಶರಿಯತ್‌ನ ಉಪಾಧ್ಯಕ್ಷ 87 ವರ್ಷದ ಖೈರುಲ್ಲಾ ಇಸ್ಲಾಂ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ನಾಗವಾನ್‌ನ ಸ್ವಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸುಮಾರು 10 ಸಾವಿರ ಜನ ಸೇರಿರುವುದು ವರದಿಯಾಗಿದೆ.

ಖೈರುಲ್ಲಾ ಇಸ್ಲಾಂ ಮಗ ಹಾಗೂ ಸ್ಥಳೀಯ ಎಐಯುಡಿಎಫ್‌ ಶಾಸಕ ಅಮಿನುಲ್‌ ಇಸ್ಲಾಂ ಸಾಮಾಜಿಕ ಜಾಲತಾಣಗಳಲ್ಲಿ ಅಂತ್ಯ ಕ್ರಿಯೆಯ ಫೋಟೋಗಳನ್ನು ಹಂಚಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಪ್ರಕಾರ ಖೈರುಲ್ಲಾ ಅಂತ್ಯ ಕ್ರಿಯೆಯಲ್ಲಿ 10,000 ಜನ ಭಾಗಿಯಾಗಿರುವ ಅಂದಾಜು ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರೆ, ಮ್ಯಾಜಿಸ್ಟ್ರೇಟ್‌ ಒಂದು ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ನಾಗ್‌ವಾನ್‌ ಜಿಲ್ಲಾಧಿಕಾರಿ ಜಾಧವ್‌ ಸೈಕಿಯಾ ಹೇಳಿದ್ದಾರೆ. ಜೊತೆಗೆ ಮೂರು ಗ್ರಾಮಗಳಲ್ಲಿ ವೈರಸ್‌ ಹರಡದಂತೆ ಲಾಕ್‌ಡೌನ್‌ ಕೂಡ ಜಾರಿಗೊಳಿಸಲಾಗಿದೆ.

ಕೊರೊನಾ ವೈರಸ್‌ ಕಾನೂನುಗಳನ್ನು ಅಂತ್ಯಕ್ರಿಯೆಯಲ್ಲಿ ಉಲ್ಲಂಘಿಸಲಾಗಿದೆ. ಯಾವುದೇ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಿಲ್ಲ ಮತ್ತು ಹಲವರು ಮಾಸ್ಕ್‌ ಧರಿಸಿಲ್ಲ. ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸೈಕಾ ಹೇಳಿದ್ದಾರೆ.

ಇನ್ನು, ಘಟನೆಗೆ ಸಂಬಂಧಿಸಿದಂತೆ ಖೈರುಲ್ಲಾ ಪುತ್ರ ಹಾಗೂ ಸ್ಥಳೀಯ ಶಾಸಕ ಅಮೀನುಲ್ಲಾ ಇಸ್ಲಾಂ, ನಮ್ಮ ತಂದೆ ಇಲ್ಲಿ ಪ್ರಸಿದ್ಧರಾಗಿದ್ದು, ಬಹಳಷ್ಟು ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದರು. ನಿಯಮಗಳ ಪ್ರಕಾರ ತಂದೆಯವರ ನಿಧನ ಹಾಗೂ ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

Comments are closed.