ಕರಾವಳಿ

ಮಂಗಳೂರು ಬಂಗ್ಲಗುಡ್ಡೆ ಭೂಕುಸಿತ ಪ್ರಕರಣ : ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಮೃತ್ಯು

Pinterest LinkedIn Tumblr

ಮಂಗಳೂರು, ಜುಲೈ 05 : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಸಫ್ವಾನ್ (16) ಹಾಗೂ ಸಹಾಲ (10) ಎಂದು ಮೃತಪಟ್ಟ ದುರ್ದೈವಿಗಳು.

ದ.ಕ.ಜಿಲ್ಲೆಯ ಮಂಗಳೂರಿನ ಹೊರವಲಯದಲ್ಲಿರುವ ಗುರುಪುರ ಕೈಕಂಬದ ಬಂಗ್ಲಗುಡ್ಡೆಯಲ್ಲಿ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ನಾಲ್ಕು ಮನೆಗಳು ನೆಲಸಮವಾಗಿವೆ.

ಗುಡ್ಡ ಕುಸಿತದಲ್ಲಿ ಈ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ಪೊಲೀಸರ ಸಹಾಯದಿಂದ ಸ್ಥಳೀಯರು ಹಾಗೂ ಎನ್ ಡಿ ಅರ್ ಎಫ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಲವು ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಮಕ್ಕಳ ಮೃತದೇಹವನ್ನು ಪತ್ತೆಹಚ್ಚಿ ಹೊರಗೆ ತರಲು ಸಾಧ್ಯವಾಯಿತು.

ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಮನೆ ಕಳೆದುಕೊಂಡವರನ್ನು ಸ್ಥಳೀಯ ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಸುತ್ತಮುತ್ತಲಿನ ಹಲವಾರು ಮನೆಗಳು ಅಪಾಯದಲ್ಲಿದೆ ಎಂದು ಹೇಳಲಾಗುತ್ತಿದ್ದು, ಸುತ್ತಮುತ್ತಲಿನ ಸುಮಾರು 15 ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್​ ಕುಮಾರ್​ ಕಟೀಲು, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಸರ್ಕಾರದಿಂದ ಹೊಸ ಮನೆಗಳನ್ನು ನಿರ್ಮಿಸ ಲಾಗುವುದು ಎಂದು ಸಚಿವ ಪೂಜಾರಿ ಕುಟುಂಬಗಳಿಗೆ ಭರವಸೆ ನೀಡಿದ್ದಾರೆ

Comments are closed.