ಕರಾವಳಿ

ದ.ಕ.ಜಿಲ್ಲೆಯಲ್ಲಿ ಬುಧವಾರ ಮತ್ತೆ ಕೊರೋನಾ ಮಾಹಾಸ್ಫೋಟ – 84 ಪಾಸಿಟಿವ್ ಪತ್ತೆ : ರಾಜ್ಯದಲ್ಲಿ 1272 ಮಂದಿಯಲ್ಲಿಸೋಂಕು ಪತ್ತೆ

Pinterest LinkedIn Tumblr

ಮಂಗಳೂರು, ಜುಲೈ.01 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ದಾಖಲೆಯ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇಂದು ಮತ್ತೆ 84 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಮತ್ತೊಮ್ಮೆ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇಂದು ಮತ್ತೆ ಒಂದೇ ದಿನ ಬರೋಬ್ಬರಿ 1272 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಸೋಂಕಿತರ ಒಟ್ಟು ಸಂಖ್ಯೆ16,514ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಬುಧವಾರ ಒಂದೇ ದಿನ 1272 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿಬರೋಬ್ಬರಿ 84 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ, ಹಾಸನದಲ್ಲಿ ತಲಾ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ರಾಮನಗರ, ಕಲಬುರಗಿಯಲ್ಲಿ ತಲಾ 14, ಕೊಪ್ಪಳ 13, ರಾಯಚೂರು, ಚಿತ್ರದುರ್ಗದಲ್ಲಿ ತಲಾ 12, ಯಾದಗಿರಿ, ಬೀದರ್, ಬೆಳಗಾವಿಯಲ್ಲಿ ತಲಾ 8, ಕೊಡಗು 7, ಮಂಡ್ಯ, ಕೋಲಾರದಲ್ಲಿ ತಲಾ 5, ಶಿವಮೊಗ್ಗ 3, ಗದಗ 2, ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ.

ರಾಜ್ಯದಲ್ಲಿ ಇಂದು 9 ಮಂದಿ ಕೊರೋನಾಕ್ಕೆ ಬಲಿ :

ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ರಾಜ್ಯದಲ್ಲಿಂದು 9 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ 3, ಬೀದರ್ 2, ಬೆಂಗಳೂರು ನಗರ ಜಿಲ್ಲೆಯಲ್ಲಿ 2, ಬೆಳಗಾವಿ, ಹಾಸನದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 253ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ 16,514 ಕೊರೋನ ಸೋಂಕಿತರ ಪೈಕಿ 8063 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 145 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 253 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 8194 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದ.ಕ. ಜಿಲ್ಲೆಯಲ್ಲಿ ಮೂವರು ಬಲಿ :

ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕಿಗೆ ಮತ್ತೆಮೂವರು ಬಲಿಯಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು, ಜಿಲ್ಲೆಯಲ್ಲಿ ಕೊರೋನದಿಂದ ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ದ. ಕ. ಜಿಲ್ಲೆಯಲ್ಲಿ ಬುಧವಾರ ಒಂದೇ ದಿನದಲ್ಲಿ ಮೂವರು ಮಹಾಮಾರಿಗೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ 31 ವರ್ಷದ ಯುವಕ ಸಾವನ್ನಪ್ಪಿದ್ದು ಯುವಕ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೊರ್ವರು ಮಂಗಳೂರಿನ ಬೆಂಗ್ರೆ ನಿವಾಸಿ, 51 ವರ್ಷದ ವ್ಯಕ್ತಿ. ಕೋವಿಡ್ -19 ಸೋಂಕು ಪೀಡಿತರಾಗಿದ್ದ ಇವರು ಡಯಾಬಿಟಿಸ್ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಭಟ್ಕಳ ನಿವಾಸಿ 79 ವರ್ಷದ ವೃದ್ದ ಕೊರೋನಾಗೆ ಬಲಿಯಾಗಿದ್ದು, ಇವರು ಅಧಿಕ ರಕ್ತದೊತ್ತಡ, ಶ್ವಾಸಕೋಶದ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಇವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಇವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Comments are closed.