ಕರಾವಳಿ

ಬೋಳಾರ : ಕೊರೋನಾದಿಂದ ಮೃತಪಟ್ಟ ಯುವಕನ ದಫನ ಕಾರ್ಯಕ್ಕೆ ಸ್ಥಳೀಯರಿಂದ ಅಡ್ಡಿ – ಮನವೊಲಿಸಿ ಯಶಸ್ವಿಯಾದ ಎಸಿ

Pinterest LinkedIn Tumblr

ಮಂಗಳೂರು, ಜೂನ್.28: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಯುವಕನ ದಫನ ಕಾರ್ಯಕ್ಕೆ ಸ್ಥಳೀಯರು ಅಡ್ಡಿಪಡಿಸಿದ ಘಟನೆ ಭಾನುವಾರ ನಗರದ ಬೋಳಾರದ ಮಸೀದಿಯ ಆವರಣದಲ್ಲಿರುವ ದಫನ ಭೂಮಿ ಬಳಿ ಸಂಭವಿಸಿದೆ.

ಕೊರೋನ ವೈರಸ್ ಸೋಂಕಿನಿಂದ ಸುರತ್ಕಲ್ ಸಮೀಪದ ಇಡ್ಯದ 31ರ ಹರೆಯದ ಯುವಕ ಶನಿವಾರ- ಭಾನುವಾರಗಳ ಮಧ್ಯೆ ಮೃತಪಟ್ಟಿದ್ದರು. ಇವರ ದಫನ ಕಾರ್ಯವು ಇಡ್ಯದ ಮಸೀದಿಗೊಳಪಟ್ಟ ದಫನ ಭೂಮಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿನ ಕಬರ್ ಗುಂಡಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಮಸೀದಿಯ ಪದಾಧಿಕಾರಿಗಳ ಮತ್ತು ಸಮುದಾಯದ ಮುಖಂಡರ ಮನವಿಯ ಮೇರೆಗೆ ರವಿವಾರ ಬೆಳಗ್ಗೆಯೇ ಬೋಳಾರದ ಮಸೀದಿಯ ಆವರಣದ ದಫನ ಭೂಮಿಯಲ್ಲಿ ದಫನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು.

ಆದರೆ ಕೊರೋನಕ್ಕೆ ಬಲಿಯಾದ ಯುವಕನ ಅಂತ್ಯ ಸಂಸ್ಕಾರವನ್ನು ಬೋಳಾರದ ಮಸೀದಿಯ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸುವುದಕ್ಕೆ ಸ್ಥಳೀಯರು (ಮಸೀದಿಗೆ ಸಂಬಂಧ ವಿಲ್ಲದ ಸ್ಥಳೀಯ ಕೆಲವು ಮಂದಿ) ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಥಳೀಯರ ಪ್ರತಿರೋಧದ ಹಿನ್ನೆಲೆಯಲ್ಲಿ ಬೋಳಾರದ ಮಸೀದಿಯಲ್ಲಿ ದಫನ ಮಾಡುವ ಕಾರ್ಯ ವನ್ನು ಕೈ ಬಿಟ್ಟು ಮೃತದೇಹವನ್ನು ಎಂಬುಲೆನ್ಸ್ ಮೂಲಕ ಇಡ್ಯಾಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್ ಅವರು ಮೃತದೇಹವನ್ನು ಮತ್ತೆ ಬೋಳಾರಕ್ಕೆ ತರುವಂತೆ ಸೂಚಿಸಿದರು. ಅಲ್ಲದೆ ತಕ್ಷಣ ಬೋಳಾರಕ್ಕೆ ಧಾವಿಸಿ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುವವರ ಜೊತೆ ಮಾತುಕತೆ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾದರು.

ಸಹಾಯಕ ಆಯುಕ್ತ ಮದನ್‌ ಮೋಹನ್ ಅವರ ಮಧ್ಯಪ್ರವೇಶದಿಂದ ಅವರು ನಡೆಸಿದ ಮಾತುಕತೆಯಿಂದ ಸ್ಥಳೀಯರು ಕೊನೆಗೆ ಒಪ್ಪಿಗೆ ಕೊಟ್ಟ ಹಿನ್ನೆಲೆಯಲ್ಲಿ ಸಂಜೆಯ ಸುಮಾರಿಗೆ ಬೋಳಾರದ ಮಸೀದಿಯ ಆವರಣದಲ್ಲೇ ದಫನ ಕಾರ್ಯ ನೆರವೇರಿಸಲಾಯಿತು.

Comments are closed.