ಕರ್ನಾಟಕ

25 SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

Pinterest LinkedIn Tumblr


ಬೆಂಗಳೂರು: ಕೊರೊನಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಸಹ ಕಾಡುತ್ತಿದ್ದು, ರಾಜ್ಯಾದ್ಯಂತ ಒಟ್ಟು 25 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ತಗುಲಿದ್ದು, ಒಟ್ಟು 57 ವಿದ್ಯಾರ್ಥಿಗಳನ್ನು ‘ಹೋಮ್‌ ಕ್ವಾರಂಟೈನ್‌ನಲ್ಲಿಇಡಲಾಗಿದೆ. ಕೆಲವು ಕಡೆ ಶಿಕ್ಷಕರಿಗೆ ಮತ್ತು ಪರೀಕ್ಷಾ ಕೇಂದ್ರದ ಭದ್ರತೆಗೆ ನಿಯೋಜಿಸಿದ್ದ ಪೇದೆಗೂ ಸೋಂಕು ದೃಢಪಟ್ಟಿದೆ.

ಪರೀಕ್ಷೆ ಬರೆಯುತ್ತಿದ್ದಾಗ ಪಾಸಿಟಿವ್‌ ವರದಿ

ಪರೀಕ್ಷೆ ಬರೆಯುತ್ತಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ವಿದ್ಯಾರ್ಥಿಯೊಬ್ಬನಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನೊಂದಿಗೆ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಇತರೆ 19 ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಶನಿವಾರ ನಡೆದ ಗಣಿತ ಪರೀಕ್ಷೇ ವೇಳೆ ವಿದ್ಯಾರ್ಥಿಗೆ ಯಾವುದೇ ಸೋಂಕಿನ ಲಕ್ಷಣಗಳಿರಲಿಲ್ಲ. ಆದರೆ ಇದಕ್ಕೂ ಮೊದಲು ಆತ ಡೆಂಗೆ ಜ್ವರದ ತಪಾಸಣೆಗೆ ಒಳಗಾಗಿದ್ದು, ಕೋವಿಡ್‌-19 ಪರೀಕ್ಷೆ ಸಹ ನಡೆಸಲಾಗಿತ್ತು. ಮಧ್ಯಾಹ್ನ ವೇಳೆಗೆ ವೈದ್ಯಕೀಯ ವರದಿ ಬಂದಿತು. ಈತ ಇದ್ದ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಇತರೆ 19 ವಿದ್ಯಾರ್ಥಿಗಳನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಅಜ್ಜಿಗೆ ಕೊರೊನಾ, ಮೊಮ್ಮಗಳಿಗೆ ವಿನಾಯ್ತಿ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೇಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳ ಅಜ್ಜಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಂಗ್ಲಿಷ್‌ ಪರೀಕ್ಷೆಗೆ ಹಾಜರಾಗಿದ್ದ ಈ ವಿದ್ಯಾರ್ಥಿನಿಗೆ ಗಣಿತ ಪರೀಕ್ಷೆಯಿಂದ ವಿನಾಯಿತಿ ನೀಡಿ, ಆಗಸ್ಟ್‌ ತಿಂಗಳಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ.

ವೀಕ್ಷಕರಿಗೆ ಪಾಸಿಟಿವ್‌

ಜೂ.25ರಂದು ನಡೆದ ಎಸ್ಸೆಸ್ಸೆಲ್ಸಿ ಇಂಗ್ಲಿಷ್‌ ಪರೀಕ್ಷೆ ವೇಳೆ ವೀಕ್ಷಕರಾಗಿ ನೇಮಕಗೊಂಡಿದ್ದ ಹಿಂದುಳಿದ ವರ್ಗಗಳ ಇಲಾಖಾ ವಿಸ್ತರಣಾಧಿಕಾರಿಗೆ ಶುಕ್ರವಾರ ಸೋಂಕು ಇರುವುದು ದೃಢಪಟ್ಟಿದೆ. ಈ ಅಧಿಕಾರಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅರಸಿಕೆರೆ ಸರಕಾರಿ ಪ್ರೌಢಶಾಲೆಗೆ ಪರಿಶೀಲನೆಗೆ ತೆರಳಿ, ಕೇಂದ್ರದ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕುಳಿತು ಚರ್ಚಿಸಿ ವಾಪಾಸಾಗಿದ್ದರು. ಆದರೆ ಯಾವುದೇ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಎಲ್ಲಾ ಸಿಬ್ಬಂದಿಗಳನ್ನು ಬದಲಾವಣೆ ಮಾಡಲಾಗಿದೆ.

ವಿಶೇಷ ಚೇತನ ವಿದ್ಯಾರ್ಥಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ಜತ್ತಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತನ ಸಂಪರ್ಕದ 19 ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪರೀಕ್ಷಾ ಕೇಂದ್ರ ಪ್ರದೇಶ ಸೀಲ್‌ಡೌನ್‌

ಬೆಂಗಳೂರಿನ ಮೂಡಲಪಾಳ್ಯದ ಸೇಂಟ್‌ ಕ್ಸೇವಿಯರ್‌ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ರಸ್ತೆಯೊಂದರ ನಿವಾಸಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪ್ರದೇಶವನ್ನು ಸೀಲ್ಡೌನ್‌ ಮಾಡಲಾಗಿದೆ. ಸುರಕ್ಷತಾ ಕ್ರಮಗಳೊಂದಿಗೆ ಗಣಿತ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ಪರೀಕ್ಷೆಗಳನ್ನು ಪ್ರತ್ಯೇಕ ಕೇಂದ್ರದಲ್ಲಿ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಸಚಿವ ಸುರೇಶ್‌ಕುಮಾರ್‌ ಹೇಳಿದರು.

ಶಿಕ್ಷಕನಿಗೆ ಕೊರೊನಾ ಪಾಸಿಟಿವ್‌

ಕೆಂಭಾವಿ: ಹುಣಸಗಿ ಪಟ್ಟಣದ ಶಿಕ್ಷಕರೊಬ್ಬರು ಕೆಂಭಾವಿಯ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಆಗಮಿಸಿದ್ದ ವೇಳೆ ಆರೋಗ್ಯ ಸರಿಯಿಲ್ಲದ ಇಲ್ಲದ ಕಾರಣ ವಾಪಸ್‌ ಹೋಗಿದ್ದರು. ಅವರಿಗೆ ಪಾಸಿಟಿವ್‌ ದೃಢಪಟ್ಟಿದೆ. ಇದರಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಶಿಕ್ಷಕರು ಹಾಗೂ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಆತಂಕ ಎದುರಿಸುವಂತಾಗಿದೆ.

ಸ್ಯಾನಿಟೈಸ್‌ ಮಾಡಿ ಗಣಿತ ಪರೀಕ್ಷೆ

ಅರಸೀಕೆರೆ: ಉಚ್ಚಂಗಿದುರ್ಗ ಕೇಂದ್ರದಲ್ಲಿ ಜೂ.25ರಂದು ಕರ್ತವ್ಯ ನಿರ್ವಹಿಸಿದ ಪೇದೆಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ಕೇಂದ್ರಕ್ಕೆ ಸ್ಯಾನಿಟೈಸ್‌ ಮಾಡಿ ಶನಿವಾರ ಗಣಿತ ಪರೀಕ್ಷೆ ನಡೆಸಲಾಯಿತು.

ಕಂಟೈನ್ಮೆಂಟ್‌ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು

ಬಾಗಲಕೋಟೆ : ಜಿಲ್ಲೆಯ ಕಲಾದಗಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿದ್ದು, ತಕ್ಷಣ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಕಂಟೈನ್ಮೆಂಟ್‌ ಪ್ರದೇಶದಲ್ಲಿದ್ದ 9 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಜ್ಞರ ಮೊರೆ ಹೋದ ಶಿಕ್ಷಣ ಸಚಿವ

ಸೋಂಕಿತರು ಪತ್ತೆಯಾದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳನ್ನು ಮುಂದುವರಿಸುವ ಮತ್ತು ಸೋಂಕಿತರಿಗೆ ಯಾವ ರೀತಿ ಪರೀಕ್ಷೆ ನಡೆಸುವ ಸಂಬಂಧ ಸೂಕ್ತ ಮಾರ್ಗದರ್ಶನ ನೀಡುವಂತೆ ತಜ್ಞರ ಸಮಿತಿಗೆ ಮನವಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಸೋಂಕಿತ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು. ಈ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೊಳಗಾಗುವ ಅಗತ್ಯವಿಲ್ಲ,” ಎಂದು ಹೇಳಿದರು.

“ರಾಜ್ಯಾದ್ಯಂತ ಕೊರೊನಾ ಸೋಂಕಿತ ‘ಹದಿಹರೆಯ’ದವರ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುವುದು. ಒಂದು ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿರುವ ಮಗುವಿಗೆ ಸೋಂಕು ತಗುಲಿರುವುದು ಪತ್ತೆಯಾದರೆ, ಪರೀಕ್ಷೆಗೂ ಮುನ್ನವೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಪೂರಕ ಪರೀಕ್ಷೆ ವೇಳೆ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು,” ಎಂದು ಸಚಿವರು ತಿಳಿಸಿದರು.

Comments are closed.