ರಾಷ್ಟ್ರೀಯ

ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಕಿರುಕುಳ- ಪೈಲಟ್‍ನ ಟೆಕ್ಕಿ ಪತ್ನಿ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪತಿಯ ಕಿರುಕುಳವನ್ನು ಸಹಿಸಲಾಗದೇ ಪೈಲಟ್ ಪತ್ನಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಲಾವಣ್ಯ (32) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೋಶಿಯಲ್ ಮೀಡಿದಲ್ಲಿ ಅನೇಕ ಪೋಸ್ಟ್‌ಗಳನ್ನು ಹಾಕುವ ಮೂಲಕ ತನಗೆ ಆಗುತ್ತಿರುವ ಕಿರುಕುಳವನ್ನು ವಿವರಿಸಿದ್ದಾರೆ. ಇದೀಗ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.

ಏನಿದು ಪ್ರಕರಣ?
ಮೃತ ಲಾವಣ್ಯ ಎಂಎನ್‍ಸಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2012 ರಲ್ಲಿ ಎಂ.ವೆಂಕಟೇಶ್ ಜೊತೆ ಮದುವೆಯಾಗಿದ್ದರು. ಪತಿ ವೆಂಕಟೇಶ್ ಟ್ರೂಜೆಟ್ ಏರ್‌ಲೈನ್ಸ್‌ನ ಹಿರಿಯ ಪೈಲಟ್ ಆಗಿ ಕೆಲಸ ಮಾಡುತ್ತಿದ್ದನು. ಈ ದಂಪತಿ ಮದುವೆಯಾಗಿ ಎಂಟು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಇದರಿಂದ ಪತಿ ಮತ್ತು ಮನೆಯವರು ಲಾವಣ್ಯಗೆ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದೆ ಲಾವಣ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲಂಗಾಣದ ಶಂಶಾಬಾದ್‍ನಲ್ಲಿರುವ ಅವರ ನಿವಾಸದಲ್ಲಿ ಲಾವಣ್ಯ ಶವವಾಗಿ ಪತ್ತೆಯಾಗಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. “ಹಲವಾರು ತಿಂಗಳುಗಳಿಂದ ನನ್ನ ಪತಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು, ಅದನ್ನು ಸಹಿಸಿಕೊಂಡಿದ್ದೇನೆ. ಯಾಕೆಂದರೆ ನಾನು ಅವನನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅವನು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನು. ಈ ಬಗ್ಗೆ ನನಗೂ ತಿಳಿಸಿದ್ದನು. ಆದರೆ ನಾನು ಅವನ ಅನೈತಿಕ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಾನು ಅವನನ್ನು ಯಾಕೆ ಪ್ರೀತಿಸಬೇಕು ಮತ್ತು ನಾನು ಯಾಕೆ ಬದುಕಬೇಕು?” ಎಂದು ನೋವಿನಿಂದ ಪ್ರಶ್ನೆ ಮಾಡಿದ್ದಾರೆ.

ನನ್ನ ತಪ್ಪುಗಳಿಂದ ನಾನು ಕೆಲವು ವಿಷಯಗಳನ್ನು ಅರಿತುಕೊಂಡಿದ್ದೇನೆ. ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೆ ಮೋಸ ಮಾಡುತ್ತಿದ್ದಾನೆ. ಆತ ಬೇರೆ ಬೇರೆ ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಸುಳ್ಳು ಹೇಳಿ ಮಹಿಳೆಯೊಂದಿಗೆ ಹೋಟೆಲ್‍ಗೆ ಹೋಗುತ್ತಾನೆ. ನಾನು ಎಷ್ಟೇ ಹೇಳಿದರೂ ಆತ ತನ್ನ ತಪ್ಪನ್ನು ಸರಿಪಡಿಸಿಕೊಂಡಿಲ್ಲ. ಇಂತಹವನ ಜೊತೆ ಬದುಕಲು ಸಾಧ್ಯವಿಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಪ್ಪ, ಅಮ್ಮಾ ನನ್ನನ್ನು ಕ್ಷಮಿಸಿ. ನೀವು ನನಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರಿ. ಆದರೆ ಈತ ಮಾಡುವುದೆಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆತ ಮಾಡಿದ ತಪ್ಪಿಗೆ ಅವನೇ ಶಿಕ್ಷೆ ಅನುಭವಿಸುತ್ತಾನೆ ಎಂದು ಕೊನೆಯ ವಿಡಿಯೋದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ನಮ್ಮ ಅಳಿಯ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಿಲ್ಲ. ಇದರಿಂದ ಕೋಪಗೊಂಡು ನನ್ನ ಮಗಳನ್ನು ದೂಷಿಸುತ್ತಿದ್ದನು. ಕೆಲವು ವರ್ಷಗಳಿಗೆ ಮಗಳಿಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು. ಆದರೆ ನನ್ನ ಮಗಳು ಇತ್ತೀಚೆಗೆ ನಮಗೆ ತಿಳಿಸಿದ್ದನು. ಹೀಗಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂದರೆ ನಾನು ನಂಬುವುದಿಲ್ಲ. ನನ್ನ ಮಗಳನ್ನು ವೆಂಕಟೇಶ್ ಕೊಂದು ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಹಾಕಿದ್ದಾನೆ ಎಂದು ಲಾವಣ್ಯ ತಂದೆ ಆರೋಪಿಸಿದ್ದಾರೆ.

ಅಲ್ಲದೇ ವೆಂಕಟೇಶ್ ತಮ್ಮ ಮಗಳ ಮೇಲೆ ಹಲ್ಲೆ ಮಾಡಿರುವ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ. ವಿಡಿಯೋದಲ್ಲಿ ಆರೋಪಿ ವೆಂಕಟೇಶ್ ಪತ್ನಿಗೆ ಅಮಾನವೀಯವಾಗಿ ಹೊಡೆದಿದ್ದಾನೆ. ಇದೇ ವೇಳೆ ಸಾಕಿದ್ದ ನಾಯಿ ಹೊಡೆಯುತ್ತಿರುವುದನ್ನು ಬಿಡಿಸಲು ಪ್ರಯತ್ನ ಮಾಡಿದೆ.

ವೆಂಕಟೇಶ್ ಹೈದರಾಬಾದ್ ಮತ್ತು ಚೆನ್ನೈನ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ಈ ದಂಪತಿ 2012ರಲ್ಲಿ ವಿವಾಹವಾಗಿದ್ದರು. ಮದುವೆ ನಂತರ ವೆಂಕಟೇಶ್ ತನ್ನ ಕೆಲಸ ಕಳೆದುಕೊಂಡಿದ್ದನು. ಆಗ ಮೃತ ಲಾವಣ್ಯ ಕೆಲಸಕ್ಕೆ ಹೋಗಿ ಆತನ ಕುಟುಂಬದವರನ್ನು ಪೋಷಣೆ ಮಾಡಿದ್ದರು. ಬಳಿಕ ವೆಂಕಟೇಶ್ ಪೈಲಟ್ ಆಗಿ ಕೆಲಸ ಮಾಡಿದ್ದು, ತಿಂಗಳಿಗೆ ಸುಮಾರು 7 ಲಕ್ಷ ಸಂಪಾದಿಸುತ್ತಿದ್ದನು. ಆದರೆ ಮಕ್ಕಳಾಗಿಲ್ಲ ಎಂದು ಅಸಮಾಧಾನಗೊಂಡು ಪತ್ನಿಯನ್ನು ದೈಹಿಕವಾಗಿ ಹಿಂಸುತ್ತಿದ್ದನು. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ತಿಳಿಸಿದ್ದಾರೆ.

Comments are closed.